ಹೈದರಾಬಾದ್: ಕಳೆದ ವರ್ಷ 12 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿ ಗೂಗಲ್ ಸಂಸ್ಥೆ ಆದೇಶಿಸಿತು. ಇದು ಟೆಕ್ ಜಗತ್ತಿನಲ್ಲೇ ಸಾಕಷ್ಟು ತಲ್ಲಣ ಮೂಡಿಸಿದ್ದು, ಸುಳ್ಳಲ್ಲ. ಸಂಸ್ಥೆಯಲ್ಲಿ ಶೇ 6ರಷ್ಟು ಉದ್ಯೋಗ ಕಡಿತವನ್ನು ಗೂಗಲ್ ಮತ್ತು ಆಲ್ಫಾಬೆಟ್ ಸಂಸ್ಥೆಯ ಸಿಇಒ ಸುಂದರ್ ಪಿಚ್ಚೈ ಸಮರ್ಥಿಸಿಕೊಂಡಿದ್ದಾರೆ. ಗುರುವಾರ ಗೂಗಲ್ನಲ್ಲಿ ನಡೆದ ಆಂತರಿಕ ಸಭೆಯಲ್ಲಿ ಸಂಸ್ಥೆಯ ನಿಲುವಿಗೆ ಉದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲ ಘಟನೆ ನಡೆದು ಒಂದು ವರ್ಷದ ಬಳಿಕ ಈ ಕುರಿತು ಮಾತನಾಡಿರುವ ಸಿಇಒ ಸುಂದರ್ ಪಿಚ್ಚೈ, ಇದು ಸರಿಯಾದ ದಾರಿಯಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಭಾರಿ ಸಂಖ್ಯೆಯ ಉದ್ಯೋಗ ವಜಾದ ನಿರ್ಧಾರದಿಂದ ನಮ್ಮ ಬೆಳವಣಿಗೆ ಮತ್ತು ಪಿ ಅಂಡ್ ಎಲ್ ಮೇಲೆ ಯಾವ ಪರಿಣಾಮ ಬೀರಿತು ಮತ್ತು ಇದು ನೈತಿಕವೇ? ಎಂದು ಉದ್ಯೋಗಿಗಳು ಪಿಚ್ಚೈಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಠಿಣ ನಿರ್ಧಾರ ತೆಗೆದುಕೊಂಡು ಇಲ್ಲಿಗೆ ಒಂದು ವರ್ಷ ಆಯಿತು.
ಈ ರೀತಿ ಕಷ್ಟ ಪರಿಸ್ಥಿತಿಯಲ್ಲಿ ಯಾವುದೇ ಸಂಸ್ಥೆ ಮುನ್ನಡೆಯುವುದು ಕಷ್ಟ. ಗೂಗಲ್ನಲ್ಲಿ ಕಳೆದ 25 ವರ್ಷದಿಂದ ಈ ರೀತಿಯ ಕಠಿಣ ಸಂದರ್ಭ ಎದುರಾಗಿರಲಿಲ್ಲ. ನೈತಿಕವಾಗಿ ಇದು ದೊಡ್ಡ ಪರಿಣಾಮ ಹೊಂದಿದೆ. ಈ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಯಿತಾದರೂ ಅಗತ್ಯವಾಗಿತ್ತು. ಒಂದು ವೇಳೆ ಕಂಪನಿ ಕಳೆದ ವರ್ಷ ಉದ್ಯೋಗ ವಜಾದಂತಹ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ, ಅದು ಮತ್ತಷ್ಟು ಕೆಟ್ಟ ಪರಿಸ್ಥಿತಿಗೆ ಕಾರಣವಾಗುತ್ತಿತ್ತು ಎಂದಿದ್ದಾರೆ.