ಪೂರ್ಣ ಹಿಮದಿಂದಲೇ ಆವೃತವಾಗಿರುವ ಅಂಟಾರ್ಕ್ಟಿಕಾದಲ್ಲಿ 4 ತಿಂಗಳ ಬಳಿಕ ಸೂರ್ಯ ರಶ್ಮಿ ಬೆಳಗಿದೆ. ಇದರ ಚಿತ್ರವನ್ನು ಯುರೋಪ್ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದೆ.
ಅಂಟಾರ್ಕ್ಟಿಕಾದಲ್ಲಿ ದೀರ್ಘ ಕತ್ತಲೆ ಈ ವರ್ಷದ ಮೇ ತಿಂಗಳಲ್ಲಿ ಪ್ರಾರಂಭವಾಗಿತ್ತು. ಇಲ್ಲಿ ಸೂರ್ಯ 4 ತಿಂಗಳ ಕಾಲ ಅಸ್ತಮಿಸುತ್ತಾನೆ. ಇದು ಬಾಹ್ಯಾಕಾಶ ಸಂಶೋಧನೆಗೆ ಹೇಳಿ ಮಾಡಿದ ಋತುವಾಗಿರುತ್ತದೆ. ಇದೀಗ ಸೂರ್ಯ ಹಿಮದ ಮೇಲೆ ಬೆಳಕು ಚೆಲ್ಲಿದ್ದು, ಹೊಸ ಸಂಶೋಧನಾ ತಂಡಗಳು ಅಧ್ಯಯನಕ್ಕೆ ಸಿದ್ಧತೆ ನಡೆಸಲಿವೆ.
ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಹ್ಯಾನ್ಸ್ ಹ್ಯಾಗ್ಸನ್ ಅವರು ಅಂಟಾರ್ಕ್ಟಿಕಾದಲ್ಲಿ ಸೂರ್ಯ ಉದಯಿಸುತ್ತಿರುವ ಚಿತ್ರವನ್ನು ಸೆರೆ ಹಿಡಿದು ಬಿಡುಗಡೆ ಮಾಡಿದ್ದಾರೆ. ಜೊತೆಗೆ "ಇಲ್ಲಿನ ಸಮಯವು ವೇಗವಾಗಿ ಮತ್ತು ಬಹಳ ನಿಧಾನವಾಗಿ ಗತಿಸುವ ವಿಚಿತ್ರ ಗುಣವನ್ನು ಹೊಂದಿದೆ. 2 ದಿನಗಳಲ್ಲಿ 75 ಡಿಗ್ರಿಯಷ್ಟು ದಕ್ಷಿಣದಲ್ಲಿ ಸೂರ್ಯನ ಹೊರಳುವಿಕೆಯನ್ನು ನಾವಿಲ್ಲಿ ಗಮನಿಸಬಹುದು" ಎಂದು ಹೇಳಿದ್ದಾರೆ.