ಸ್ಯಾನ್ ಫ್ರಾನ್ಸಿಸ್ಕೋ : ಸಬ್‌ಸ್ಟ್ಯಾಕ್ (Substack) ಎಂಬ ಶಬ್ದ ಇರುವ ಯಾವುದೇ ಟ್ವೀಟ್ ಅನ್ನು ಲೈಕ್ ಮಾಡುವ ಅಥವಾ ರಿಟ್ವೀಟ್ ಮಾಡುವ ಸೌಲಭ್ಯವನ್ನು ಬ್ಲಾಕ್ ಮಾಡಿರುವ ಟ್ವಿಟರ್ ಕ್ರಮಕ್ಕೆ ಪ್ರತಿಕ್ರಿಯೆ ನೀಡಿರುವ ಸಬ್‌ಸ್ಟ್ಯಾಕ್, ಟ್ವಿಟರ್ನ ಪರಿಸ್ಥಿತಿ ತುಂಬಾ ನಿರಾಶಾದಾಯಕವಾಗಿದೆ ಎಂದು ಹೇಳಿದೆ. ಸಬ್‌ಸ್ಟ್ಯಾಕ್ ಇದು ಪಾವತಿ ಮಾಡಿ ಪಡೆದುಕೊಳ್ಳುವ ಜನಪ್ರಿಯ ನ್ಯೂಸ್ಲೆಟರ್ ಪ್ಲಾಟ್ಫ್ಲಾರ್ಮ್ ಆಗಿದೆ.
ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರಿಗೆ ಪ್ರತಿಕ್ರಿಯೆ ನೀಡಿರುವ ಸಬ್‌ಸ್ಟ್ಯಾಕ್ ಸಿಇಒ ಕ್ರಿಸ್ ಬೆಸ್ಟ್, ಮಸ್ಕ್ ಅವರ ಯಾವುದೇ ಆರೋಪಗಳು ನಿಜವಲ್ಲ ಮತ್ತು ಸಬ್‌ಸ್ಟ್ಯಾಕ್ ಲಿಂಕ್‌ಗಳನ್ನು ಟ್ವಿಟರ್‌ನಲ್ಲಿ ನಿರ್ಬಂಧಿಸಲಾಗಿದೆ ಎಂದಿದ್ದಾರೆ. ನಾವು ಬರಹಗಾರರಿಗೆ ಸಹಾಯ ಮಾಡಲು ವರ್ಷಗಳಿಂದ Twitter API ಅನ್ನು ಬಳಸಿದ್ದೇವೆ. ನಾವು ನಿಯಮಗಳನ್ನು ಪಾಲಿಸಿದ್ದೇವೆ ಎಂಬು ನಂಬಿದ್ದೇವೆ. ಆದಾಗ್ಯೂ ಯಾವುದೇ ನಿರ್ದಿಷ್ಟ ನಿಯಮ ಉಲ್ಲಂಘನೆಯ ವಿಷಯ ಇದ್ದರೆ ನಾವು ಅದನ್ನು ತಿಳಿಯಲು ಇಷ್ಟಪಡುತ್ತೇವೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಾವು ಸಂತೋಷಪಡುತ್ತೇವೆ ಬೆಸ್ಟ್, ಮಸ್ಕ್ಗೆ ಪ್ರತಿಕ್ರಿಯಿಸಿದ್ದಾರೆ.
ಆನ್‌ಲೈನ್ ಪಬ್ಲಿಷಿಂಗ್ ಪ್ಲಾಟ್‌ಫಾರ್ಮ್ ಸಬ್‌ಸ್ಟ್ಯಾಕ್‌ನಲ್ಲಿನ ಪೋಸ್ಟ್‌ಗಳಲ್ಲಿ ಟ್ವೀಟ್‌ಗಳನ್ನು ಎಂಬೆಡಿಂಗ್ ಮಾಡಲಾಗದಂತೆ ನಿರ್ಬಂಧಿಸಲಾಗಿದೆ ಎಂಬ ಆರೋಪಗಳನ್ನು ಮಸ್ಕ್ ಕಳೆದ ವಾರ ನಿರಾಕರಿಸಿದ್ದರು. ಟ್ವಿಟರ್ ಫೈಲ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಖ್ಯಾತರಾಗಿರುವ ಸ್ವತಂತ್ರ ಪತ್ರಕರ್ತ ಮತ್ತು ಲೇಖಕ ಮ್ಯಾಟ್ ತೈಬ್ಬಿ ಅವರು ಈ ಹಿಂದೆ ಸಬ್‌ಸ್ಟಾಕ್‌ನ ಉದ್ಯೋಗಿಯಾಗಿದ್ದರು ಎಂದು ಟ್ವಿಟರ್ ಸಿಇಒ ಪೋಸ್ಟ್ ಮಾಡಿದ್ದಾರೆ. ಮ್ಯಾಟ್ ತೈಬ್ಬಿ ಸಬ್ಸ್ಟಾಕ್ನಲ್ಲಿ ಬರೆಯುತ್ತಾರೆ ಮತ್ತು ಓದುಗರಿಂದ ನೇರವಾಗಿ ಹಣ ಪಡೆಯುತ್ತಾರೆ. ಇದು ಬರಹಗಾರರು ಹಣ ಸಂಪಾದಿಸುವ ವಿಚಿತ್ರ ಪರಿಕಲ್ಪನೆಯಾಗಿದೆ ಎಂದು ಮಸ್ಕ್ ಹೇಳಿದ್ದರು.