ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದರೂ, ಈ ಪ್ರಕ್ರಿಯೆ ಇನ್ನೂ ಆರಂಭಿಕ ಆರಂಭಿಕ ಹಂತದಲ್ಲಿದೆ. ಸರ್ಕಾರದ 'ಫೇಮ್' (ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್) ಯೋಜನೆ ಮತ್ತು ರಾಜ್ಯ ಮಟ್ಟದ ಸಬ್ಸಿಡಿಗಳ ನೇರ ಖರೀದಿ ಪ್ರೋತ್ಸಾಹದಿಂದ ಈ ವಲಯದ ಬೆಳವಣಿಗೆ ಗಮನಾರ್ಹವಾಗಿ ಹೆಚ್ಚುತ್ತಿದೆ.
ನವೆಂಬರ್ 2023ರ ಹೊತ್ತಿಗೆ, ಒಎಂಐ ಫೌಂಡೇಶನ್ನ ಇವಿ-ರೆಡಿ ಇಂಡಿಯಾ ವರದಿಯ ಮಾಹಿತಿಯ ಪ್ರಕಾರ- ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿಯ ಪ್ರಮಾಣ ಶೇ 5ರಷ್ಟಿದೆ ಎಂದು ತಿಳಿಸಿದೆ. ಅಂದರೆ ಭಾರತದಲ್ಲಿ ನೋಂದಾಯಿಸಲಾಗುವ ಪ್ರತಿ 100 ವಾಹನಗಳಲ್ಲಿ 5 ಎಲೆಕ್ಟ್ರಿಕ್ ವಾಹನಗಳಾಗಿವೆ. ಎಲೆಕ್ಟ್ರಿಕ್ ವಾಹನಗಳ ಒಟ್ಟು ಖರೀದಿಯ ಪೈಕಿ ತ್ರಿಚಕ್ರ ಪ್ರಯಾಣಿಕರ ವಾಹನಗಳ ಖರೀದಿ ಶೇ 50.91 ರಷ್ಟಿದ್ದರೆ, ಸರಕು ವಾಹಕಗಳು ಶೇ 32.84, ದ್ವಿಚಕ್ರ ವಾಹನಗಳು ಶೇ 3.99ರಷ್ಟು ಮತ್ತು ಕಾರುಗಳ ಪ್ರಮಾಣ ಶೇ 1.57ರಷ್ಟಿದೆ. ಈ ವರ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಯಲ್ಲಿನ ಗಮನಾರ್ಹ ಅಂಶವೆಂದರೆ ಮೇ 2023ರಲ್ಲಿ ಶೇ 7.14 ರಷ್ಟಿದ್ದ ಇದರ ಪ್ರಮಾಣ ನವೆಂಬರ್ 2023ರಲ್ಲಿ ಶೇ 3.99ಕ್ಕೆ ಇಳಿಕೆಯಾಗಿರುವುದು.
ಆದಾಗ್ಯೂ, ತ್ರಿಚಕ್ರ ವಾಹನ ವಿಭಾಗದಲ್ಲಿ ಕಡಿಮೆ-ವೆಚ್ಚದ ಇ-ರಿಕ್ಷಾಗಳ ಕಾರಣದಿಂದ ಇವುಗಳ ಬಳಕೆ ಹೆಚ್ಚಾಗಿದೆ. ಈಗಿರುವ ಇತರೆ ಮಾದರಿಗಳ ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಎಲೆಕ್ಷ್ರಿಕ್ ವಾಹನಗಳು ಕೈಗೆಟುಕುವ ದರದಲ್ಲಿ ಸಿಗುತ್ತವೆ ಮತ್ತು ಇವುಗಳ ಅಳವಡಿಕೆಯು ಸಬ್ಸಿಡಿಗಳಿಂದ ಕಡಿಮೆ ಪ್ರಭಾವಿತವಾಗಿದೆ. ಮತ್ತೊಂದೆಡೆ, ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಸಬ್ಸಿಡಿ ನೀಡಲಾಗುತ್ತಿದ್ದರೂ ಇವುಗಳ ಖರೀದಿ ಮೌಲ್ಯವು ಈಗಿನ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ಹೆಚ್ಚಾಗಿರುವುದರಿಂದ ಇವುಗಳ ಖರೀದಿ ಪ್ರಮಾಣ ಕಡಿಮೆಯಾಗಿರಬಹುದು.
10,000 ಕೋಟಿ ರೂ.ಗಳ ಬಜೆಟ್ನೊಂದಿಗೆ ಏಪ್ರಿಲ್ 1, 2019ರಂದು ಪ್ರಾರಂಭಿಸಲಾದ ಫೇಮ್ 2 ಯೋಜನೆಯು ಮಾರ್ಚ್ 31, 2024ರಂದು ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 5, 2023 ರ ಹೊತ್ತಿಗೆ, ಈ ಯೋಜನೆಯು 11,61,350 ಎಲೆಕ್ಟ್ರಿಕ್ ವಾಹನಗಳಿಗೆ 5248.00 ಕೋಟಿ ರೂ.ಗಳ ಸಬ್ಸಿಡಿಗಳನ್ನು ವಿತರಿಸಿದೆ. ಈ ಯೋಜನೆಯನ್ನು ವಿಸ್ತರಿಸಬೇಕೆಂದು ದೇಶೀಯ ಇವಿ ಉದ್ಯಮ ಒತ್ತಾಯಿಸುತ್ತಿದ್ದರೂ ಫೇಮ್ 3 ಹಂತದ ಯೋಜನೆ ಜಾರಿಗೊಳಿಸಲು ಸರ್ಕಾರ ಹಿಂಜರಿಯುತ್ತಿದೆ ಎನ್ನಲಾಗಿದೆ. ಇದು ಇವಿ ಕ್ಷೇತ್ರದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ವಿಶೇಷವಾಗಿ ಈ ಬೆಳೆಯುತ್ತಿರುವ ಉದ್ಯಮದ ಅವಿಭಾಜ್ಯ ಅಂಗವಾದ ಸ್ಟಾರ್ಟ್ಅಪ್ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಪಳೆಯುಳಿಕೆ-ಇಂಧನ ವಾಹನಗಳ ಹೆಚ್ಚಿನ ಕಾರ್ಯಾಚರಣೆಯ ವೆಚ್ಚದಿಂದಾಗಿ ಶುದ್ಧ ಇಂಧನ ವಾಹನಗಳಿಗೆ ಪರಿವರ್ತನೆ ತಾನಾಗಿಯೇ ನಡೆಯಲಿದೆ ಎಂಬುದು ಕೆಲ ಸರ್ಕಾರಿ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಕೈಗಾರಿಕೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಇತ್ತೀಚಿನ 324ನೇ ವರದಿಯಲ್ಲಿ ಸ್ಥಿರ ನೀತಿ ಚೌಕಟ್ಟುಗಳ ಅಗತ್ಯವನ್ನು ಎತ್ತಿ ತೋರಿಸಿದೆ. ಗ್ರಾಹಕರ ವಿಶ್ವಾಸವನ್ನು ಕುಗ್ಗಿಸುವ ಮತ್ತು ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗುವ ಮಾರುಕಟ್ಟೆ ಅನಿಶ್ಚಿತತೆಗಳನ್ನು ತಡೆಗಟ್ಟಲು ಸ್ಥಿರ ನೀತಿಗಳು ಅತ್ಯಗತ್ಯ ಎಂದು ಅದು ವಾದಿಸಿದೆ. ಸಮಿತಿಯು ಫೇಮ್ -2 ಅನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಸಲಹೆ ನೀಡಿದೆ.