ಶ್ರೀಹರಿಕೋಟಾ(ಆಂಧ್ರಪ್ರದೇಶ) :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಣ್ಣ ಉಪಗ್ರಹ ಉಡಾವಣಾ ವಾಹಕ ಎಸ್ಎಸ್ಎಲ್ವಿ-ಡಿ2 ಉಡಾವಣೆ ಆಗಿದೆ. ಶುಕ್ರವಾರ 9.18ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಈ ಉಪಗ್ರಹ ಉಡಾವಣೆಯಾಗಿದ್ದು, ಮಧ್ಯರಾತ್ರಿ 2.48ರಿಂದಲೇ ಆರೂವರೆ ಗಂಟೆಗಳ ಕೌಂಟ್ಡೌನ್ ಶುರುವಾಗಿತ್ತು ಎಂದು ಇಸ್ರೋ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಸ್ಎಸ್ಎಲ್ವಿ ರಾಕೆಟ್ ಮೂರು ಉಪಗ್ರಹಗಳನ್ನು ಹೊತ್ತೊಯ್ದಿದೆ. ಇದರಲ್ಲಿ ಇಸ್ರೋನ ಭೂಮಿ ವಿಕ್ಷಣಾ ಉಪಗ್ರಹ- ಇಒಎಸ್-07, ಯುಎಸ್‌ನ ಆಂಟಾರಿಸ್‌ಗೆ ಸೇರಿದ ಜಾನಸ್ -1 ಮತ್ತು ಸ್ಪೇಸ್ ಕಿಡ್ಜ್ ಇಂಡಿಯಾ, ಚೆನ್ನೈಗೆ ಸೇರಿದ ಆಜಾದಿ ಸ್ಯಾಟ್ -2 ಉಪಗ್ರಹಗಳಿವೆ.
ಎಸ್ಎಸ್ಎಲ್ವಿ ಡಿ-2 ಒಟ್ಟಾರೆ 175.2 ಕೆಜಿ ತೂಕ ಇದೆ. ಇದರಲ್ಲಿ ಇಒಎಸ್ 07- 156.3ಕೆಜಿ, ಜಾನುಸ್-1 - 10.2 ಕೆಜಿ, ಮತ್ತು ಆಜಾದಿ ಸ್ಯಾಟ್-2 -8.7 ಕೆಜಿ ತೂಕ ಇದೆ. ಎಸ್ಎಸ್ಎಲ್ವಿ ರಾಕೆಟ್ ಕಡಿಮೆ ವೆಚ್ಚದ ಬಾಹ್ಯಕಾಶ ಸೌಲಭ್ಯವನ್ನು ಹೊಂದಿದೆ. ಅನೇಕ ಉಪಗ್ರಹಗಳಿಗೆ ಅವಕಾಶ ಕಲ್ಪಿಸುವಲ್ಲಿ ಕಡಿಮೆ ಸಮಯ ಮತ್ತು ಕನಿಷ್ಠ ಉಡಾವಣಾ ಮೂಲಸೌಕರ್ಯವನ್ನು ನೀಡುತ್ತದೆ. ರಾಕೆಟ್ ಉಡಾವಣೆಗೊಂಡ 13 ನಿಮಿಷಗಳ ನಂತರ ಎಸ್ಎಸ್ಎಲ್ವಿ ರಾಕೆಟ್ ಇಒಎಸ್-07 ಅನ್ನು ಹೊರಹಾಕುತ್ತದೆ. ಬಳಿಕ ಜಾನಸ್ -1 ಮತ್ತು ಆಜಾದಿ ಸ್ಯಾಟ್-2 ಉಪಗ್ರಹಗಳನ್ನು 450 ಕಿಮೀ ಎತ್ತರದಲ್ಲಿ ಹೊರಹಾಕುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ವಿಫಲವಾಗಿದ್ದ ಮೊದಲ ಎಸ್ಎಸ್ಎಲ್ವಿ ಡಿ-1: ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕವಾಗಿದ್ದ ಎಸ್ಎಸ್ಎಲ್ವಿ-ಡಿ-1 ರಾಕೆಟ್ ಉಡಾವಣೆ ವೈಫಲ್ಯದ ಕುರಿತು ತಿಳಿಸಿದ ಇಸ್ರೋ, ರಾಕೆಟ್ ಮೇಲಿನ ಭಾಗ ಉಪಗ್ರಹವನ್ನು ಅಸ್ಥಿರ ಕಕ್ಷೆಗೆ ತಳ್ಳಿದ ಹಿನ್ನೆಲೆ ಇದು ವಿಫಲವಾಯಿತು. ಎರಡನೇ ಹಂತದಲ್ಲಿ ಪ್ರತ್ಯೇಕಿಕರಣದಲ್ಲಿ ವೈಬ್ರೆಷನ್ ಉಂಟಾಯಿತು. ರಾಕೆಟ್‌ನ ಸಾಫ್ಟ್‌ವೇರ್ ಉಪಗ್ರಹಗಳ ನಿರ್ವಹಿಸಲು ಸಮರ್ಥವಾಗಿದ್ದರೂ, ತಪ್ಪಾದ ಕಕ್ಷೆಗೆ ಸೇರಿಸಲಾಯಿತು. ಉಪಗ್ರಹಗಳು ಸ್ಥಿರ ಕಕ್ಷೆಯಲ್ಲಿ ಇರಲು ಅಗತ್ಯವಾದ ವೇಗವನ್ನು ಸಹ ಹೊಂದಿರಲಿಲ್ಲ. ಇದೀಗ ಈ ತಪ್ಪುಗಳನ್ನು ಸರಿಪಡಿಸಿಕೊಂಡು ಎರಡನೇ ಸಣ್ಣ ಉಪಗ್ರಹ ಉಡಾವಣಾ ವಾಹಕ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.