ನ್ಯೂಯಾರ್ಕ್: ಭೂಮಿಯ ಮೂಲ ಲಕ್ಷಣಗಳು ಮಾನವರು ಹಿಂದೆಂದೂ ಕಂಡಿರದಷ್ಟು ಹದಗೆಟ್ಟಿದ್ದು, ಭೂಮಿಯ ಮೇಲಿನ ಜೀವಕ್ಕೆ ಅಪಾಯವಿದೆ ಎಂದು 161 ದೇಶಗಳ 15,000ಕ್ಕೂ ಹೆಚ್ಚು ವಿಜ್ಞಾನಿಗಳು ಸಹಿ ಮಾಡಿದ ಜಾಗತಿಕ ವರದಿಯೊಂದು ತಿಳಿಸಿದೆ.
ಬಯೋಸೈನ್ಸ್ ಹೆಸರಿನ ಜರ್ನಲ್ನಲ್ಲಿ ಪ್ರಕಟವಾದ "ದಿ 2023 ಸ್ಟೇಟ್ ಆಫ್ ದಿ ಕ್ಲೈಮೇಟ್ ರಿಪೋರ್ಟ್: ಅಜ್ಞಾತ ಪ್ರದೇಶಕ್ಕೆ ಪ್ರವೇಶ" (The 2023 State of the climate report: Entering uncharted territory) ವರದಿಯು ಭೂಮಿಯ 35 ಮೂಲ ಲಕ್ಷಣಗಳ ಪೈಕಿ 25 ಲಕ್ಷಣಗಳ ಮೇಲೆ ಹಸಿರುಮನೆ ಅನಿಲ ಹೊರಸೂಸುವಿಕೆಯ ಮೇಲೆ ಮಾನವ ಚಟುವಟಿಕೆಗಳ ಪರಿಣಾಮಗಳು ಮತ್ತು ಹವಾಮಾನ, ನಮ್ಮ ಪರಿಸರ ಮತ್ತು ಸಮಾಜದ ಮೇಲಿನ ಪರಿಣಾಮಗಳನ್ನು ತಿಳಿಸಿದೆ.
ಮಾನವ ಜನಸಂಖ್ಯೆ, ಜಾನುವಾರುಗಳ ಸಂಖ್ಯೆ, ತಲಾ ಮಾಂಸ ಉತ್ಪಾದನೆ, ತೈಲ, ಅನಿಲ ಮತ್ತು CO2 ಹೊರಸೂಸುವಿಕೆ, ವಾತಾವರಣದ ಮೀಥೇನ್, ನೈಟ್ರಸ್ ಆಕ್ಸೈಡ್, ಸಾಗರ ಆಮ್ಲೀಕರಣ, ಶಾಖ, ಇತ್ಯಾದಿಗಳು ಭೂಮಿಯ ಮೂಲ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತಿರುವ ಪ್ರಮುಖ ಅಂಶಗಳಾಗಿವೆ.
"ಮಾನವಕುಲವು ಸುರಕ್ಷಿತವಾಗಿ ನೀಡಬಹುದಾದುದಕ್ಕಿಂತ ಹೆಚ್ಚಿನದನ್ನು ಭೂಮಿಯಿಂದ ತೆಗೆದುಕೊಳ್ಳುವ ಮೂಲ ಸಮಸ್ಯೆಯನ್ನು ಪರಿಹರಿಸುವ ಕ್ರಮಗಳಿಲ್ಲದೆ, ನಾವು ನೈಸರ್ಗಿಕ ಮತ್ತು ಸಾಮಾಜಿಕ ಆರ್ಥಿಕ ವ್ಯವಸ್ಥೆಗಳ ಸಂಭಾವ್ಯ ಕುಸಿತದ ಹಾದಿಯಲ್ಲಿದ್ದೇವೆ ಮತ್ತು ಅಸಹನೀಯ ಶಾಖ ಮತ್ತು ಆಹಾರ ಮತ್ತು ಸಿಹಿನೀರಿನ ಕೊರತೆಯನ್ನು ಹೊಂದಿರುವ ಪ್ರಪಂಚವನ್ನು ನಿರ್ಮಾಣ ಮಾಡುತ್ತಿದ್ದೇವೆ" ಎಂದು ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಕಾಲೇಜ್ ಆಫ್ ಫಾರೆಸ್ಟ್ರಿಯ ಪ್ರೊಫೆಸರ್ ವಿಲಿಯಂ ರಿಪ್ಪಲ್ ಹೇಳಿದ್ದಾರೆ.
2023ರಲ್ಲಿ ಹವಾಮಾನ ಸಂಬಂಧಿತ ಅನೇಕ ದಾಖಲೆಗಳನ್ನು ಅಗಾಧ ವ್ಯತ್ಯಾಸಗಳಿಂದ ಮುರಿಯಲಾಗಿದೆ ಎಂದು ವಿವರಿಸುವ ಹೊಸ ಡೇಟಾವನ್ನು ಲೇಖಕರು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಇವು ಸಾಗರ ತಾಪಮಾನ ಮತ್ತು ಸಮುದ್ರದ ಮಂಜುಗಡ್ಡೆಗೆ ಸಂಬಂಧಿಸಿದ ವಿಷಯಗಳಾಗಿವೆ. ಅಭೂತಪೂರ್ವ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಉಂಟುಮಾಡಿದ ಅಸಾಧಾರಣ ಕೆನಡಾದ ಕಾಡ್ಗಿಚ್ಚಿನ ಋತುವನ್ನು ಕೂಡ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ.
ಕಳೆದ ಜುಲೈನಲ್ಲಿ ಭೂಮಿ ಕಂಡ ಅತ್ಯಧಿಕ ಸರಾಸರಿ ತಾಪಮಾನ ದಾಖಲಾಗಿದೆ ಮತ್ತು ಇದು ಕಳೆದ 1,00,000 ವರ್ಷಗಳಲ್ಲಿ ಭೂಮಿ ಕಂಡ ಅತಿ ಹೆಚ್ಚು ಮೇಲ್ಮೈ ತಾಪಮಾನ ಎಂದು ನಂಬಲು ಕಾರಣಗಳಿವೆ. "21 ನೇ ಶತಮಾನದ ಅಂತ್ಯದ ವೇಳೆಗೆ, 3 ರಿಂದ 6 ಬಿಲಿಯನ್ ಜನರು ಭೂಮಿಯ ವಾಸಯೋಗ್ಯ ಪ್ರದೇಶಗಳನ್ನು ಕಳೆದುಕೊಳ್ಳಬಹುದು. ಅಂದರೆ ಅವರು ತೀವ್ರ ಶಾಖ, ಸೀಮಿತ ಆಹಾರ ಲಭ್ಯತೆ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಎದುರಿಸುತ್ತಾರೆ" ಎಂದು ಕಾರ್ವಾಲಿಸ್ ಮೂಲದ ಟೆರೆಸ್ಟ್ರಿಯಲ್ ಇಕೋಸಿಸ್ಟಮ್ಸ್ ರಿಸರ್ಚ್ ಅಸೋಸಿಯೇಟ್ಸ್ನ ವಿಜ್ಞಾನಿ ಕ್ರಿಸ್ಟೋಫರ್ ವುಲ್ಫ್ ಹೇಳಿದ್ದಾರೆ.
ಪಳೆಯುಳಿಕೆ ಇಂಧನ ಸಬ್ಸಿಡಿಗಳನ್ನು ಹಂತಹಂತವಾಗಿ ತೆಗೆದುಹಾಕಲು, ಸಸ್ಯ ಆಧಾರಿತ ಆಹಾರದತ್ತ ಪರಿವರ್ತನೆ, ಅರಣ್ಯ ಸಂರಕ್ಷಣಾ ಪ್ರಯತ್ನಗಳನ್ನು ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ಕಲ್ಲಿದ್ದಲು ನಿರ್ಮೂಲನೆ ಮತ್ತು ಪಳೆಯುಳಿಕೆ ಇಂಧನ ಪ್ರಸರಣ ತಡೆ ಒಪ್ಪಂದಗಳನ್ನು ಅಳವಡಿಸಿಕೊಳ್ಳುವಂತೆ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.