ಸ್ಯಾನ್ ಫ್ರಾನ್ಸಿಸ್ಕೋ : ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್‌ನ ಬಹು ನಿರೀಕ್ಷಿತ ಮೊದಲ ಕಕ್ಷೆಯ ಹಾರಾಟವು ಏಪ್ರಿಲ್ 10 ರ ಹೊತ್ತಿಗೆ ಪ್ರಾರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ಈ ಉಡಾವಣೆಗೆ ಕೆಲವು ಅಡೆತಡೆಗಳು ಉಳಿದಿವೆ. ಈ ವಿಶಿಷ್ಟ ವಿಮಾನವು ಏಪ್ರಿಲ್ ಮೂರನೇ ವಾರದಲ್ಲಿ ನಭಕ್ಕೆ ಹಾರಬಹುದು ಎಂದು ಸ್ಪೇಸ್‌ಎಕ್ಸ್ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಮಾರ್ಚ್ ಮಧ್ಯದಲ್ಲಿ ಹೇಳಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳು ಈ ಪ್ರಯತ್ನವು ಅದಕ್ಕಿಂತ ಬೇಗ ನಡೆಯಬಹುದು ಎಂಬ ಸೂಚನೆಗಳನ್ನು ನೀಡಿದೆ.
ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಏಪ್ರಿಲ್ 10 ಅನ್ನು ಪ್ರಾಥಮಿಕ ಉಡಾವಣಾ ದಿನಾಂಕವೆಂದು ಘೋಷಣೆ ಮಾಡಿದೆ. ಏರ್ ಟ್ರಾಫಿಕ್ ಸಲಹೆಯನ್ನು ಅನುಮೋದಿಸಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ. ಇದರ ಜೊತೆಗೆ, ರಾಕೆಟ್ ಉಡಾವಣೆಯ ಒಂದು GIF ಚಿತ್ರದೊಂದಿಗೆ ಏಪ್ರಿಲ್ 10 ಎಂದು ಸರಳವಾಗಿ ಬರೆದ ಟ್ವೀಟ್ ಒಂದನ್ನು ಮಸ್ಕ್ ಲೈಕ್ ಮಾಡಿದ್ದಾರೆ. ಸ್ಪೇಸ್‌ಎಕ್ಸ್ ವಾರಾಂತ್ಯದಲ್ಲಿ ತನ್ನ ಶಿಪ್ 24 ಅನ್ನು ಸ್ಟಾರ್‌ಬೇಸ್‌ನ ಕಕ್ಷೆಯ ಉಡಾವಣಾ ಪ್ಯಾಡ್‌ಗೆ ಹೊರತಂದಿದೆ ಮತ್ತು ಸೋಮವಾರ ಕಂಪನಿಯು ಕಕ್ಷೆಯ ಉಡಾವಣಾ ಮೌಂಟ್‌ನಲ್ಲಿ ಬೂಸ್ಟರ್ 7 ನೊಂದಿಗೆ ಇಂಧನ ಪರೀಕ್ಷೆಗಳನ್ನು ನಡೆಸಿದೆ.
ಆದಾಗ್ಯೂ, FAA ಇನ್ನೂ ಸ್ಪೇಸ್‌ಎಕ್ಸ್‌ಗೆ ಉಡಾವಣಾ ಪರವಾನಗಿಯನ್ನು ನೀಡಿಲ್ಲ. ಆರ್ಸ್ ಟೆಕ್ನಿಕಾ ವಿಜ್ಞಾನ ಸಂಪಾದಕ ಎರಿಕ್ ಬರ್ಗರ್ ಪ್ರಕಾರ, ಉಡಾವಣಾ ಪರವಾನಗಿಯನ್ನು ನೀಡಿದ ತಕ್ಷಣ ಪರಿಸರ ಸಮಸ್ಯೆಗಳ ಮೇಲೆ ಸಿವಿಲ್ ಮೊಕದ್ದಮೆ ಹೂಡುವ ಸಾಧ್ಯತೆಯೂ ಇದೆ. ಈ ಪ್ರಕರಣದಲ್ಲಿ, ಆ ಸಿವಿಲ್ ಮೊಕದ್ದಮೆಯನ್ನು ಪರಿಹರಿಸುವವರೆಗೆ ರಾಕೆಟ್ ಪರೀಕ್ಷೆಯನ್ನು ನಿರ್ಬಂಧಿಸುವ ತಾತ್ಕಾಲಿಕ ತಡೆಯಾಜ್ಞೆ ಹೊರಡಿಸುವ ಅಧಿಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.