ಸ್ಯಾನ್ ಫ್ರಾನ್ಸಿಸ್ಕೋ :ಆರರಿಂದ ಎಂಟು ವಾರಗಳಲ್ಲಿ ಬೃಹತ್ ಸ್ಟಾರ್‌ಶಿಪ್ ವಾಹನದ ಕಕ್ಷೆಯ ಪರೀಕ್ಷಾ ಹಾರಾಟವನ್ನು ಸ್ಪೇಸ್‌ಎಕ್ಸ್ ಮತ್ತೊಮ್ಮೆ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ಏಪ್ರಿಲ್ 20 ರಂದು, ಮಾನವರನ್ನು ಚಂದ್ರ, ಮಂಗಳ ಮತ್ತು ಅದರಾಚೆಗೆ ಕೊಂಡೊಯ್ಯಲು ನಿರ್ಮಿಸಲಾದ ಸ್ಪೇಸ್‌ಎಕ್ಸ್‌ನ ಸಂಪೂರ್ಣ ಸಂಯೋಜಿತ ಸ್ಟಾರ್‌ಶಿಪ್ ಮತ್ತು ಸೂಪರ್ ಹೆವಿ ರಾಕೆಟ್ ತನ್ನ ಮೊದಲ ಹಾರಾಟ ಪರೀಕ್ಷೆ ಸಮಯದಲ್ಲಿ ಯಶಸ್ವಿಯಾಗಿ ಮೇಲಕ್ಕೆ ಹಾರಿತ್ತು. ಆದರೆ, ಮತ್ತಷ್ಟು ಮುಂದಕ್ಕೆ ಸಾಗಲು ವಿಫಲವಾದ ಅದು ಆಕಾಶದಲ್ಲಿ ಸ್ಫೋಟಗೊಂಡಿತ್ತು. ಆದರೆ, ಉಪಗ್ರಹವು ಸ್ಫೋಟಗೊಂಡಿರುವುದು ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಎಂದರ್ಥ ಎಂದು ಕಂಪನಿ ಹೇಳಿದೆ.
"ಮೂಲತಃ, ಫಲಿತಾಂಶ ಸರಿಸುಮಾರು ನಾನು ನಿರೀಕ್ಷಿಸಿದ ರೀತಿಯದ್ದಾಗಿದೆ ಮತ್ತು ಬಹುಶಃ ನನ್ನ ನಿರೀಕ್ಷೆಗಳನ್ನು ಸ್ವಲ್ಪಮಟ್ಟಿಗೆ ಮೀರಿದೆ" ಎಂದು ಮಸ್ಕ್ ಆವಾಗ ಟ್ವಿಟರ್ನಲ್ಲಿ ಹೇಳಿದ್ದರು. ಇದರ ನಂತರ ಮುಂದಿನ ಆರರಿಂದ ಎಂಟು ವಾರಗಳಲ್ಲಿ ಲಾಂಚ್ ಪ್ಯಾಡ್ ಮತ್ತು ಮತ್ತೊಂದು ಸ್ಟಾರ್‌ಶಿಪ್ ನೌಕೆಯನ್ನು ತಯಾರಿಸುವಂತೆ ವಿಜ್ಞಾನಿಗಳಿಗೆ ಮಸ್ಕ್ ಸೂಚಿಸಿದ್ದಾರೆ. ಏತನ್ಮಧ್ಯೆ, ರಾಕೆಟ್ ಉಡಾವಣೆ ಬಗ್ಗೆ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ. ನೌಕೆ ಸ್ಫೋಟಗೊಂಡಾಗ ಅದರಿಂದ ಚದುರುವ ಅಪಾಯಕಾರಿ ಪಳೆಯುಳಿಕೆಗಳು ಭೂಮಿಯ ಮೇಲಿನ ಮಾನವರು ಮತ್ತು ಪ್ರಾಣಿಗಳ ಆವಾಸಸ್ಥಾನಗಳಿಗೆ ಅಪಾಯವನ್ನುಂಟು ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ. ಇದರರ್ಥ ಸ್ಟಾರ್‌ಶಿಪ್‌ನ ಮುಂದಿನ ಉಡಾವಣೆಯ ಮೊದಲು, ರಾಕೆಟ್ ಸಾರ್ವಜನಿಕ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಂಬಂಧಿಸಿದ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯಬೇಕಿದೆ.