ನ್ಯೂಯಾರ್ಕ್(ಯುಎಸ್): ಬಾಹ್ಯಾಕಾಶ ಅಧ್ಯಯನಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಎಲಾನ್ ಮಸ್ಕ್ ಒಡೆತನದ ಸ್ಪೇಸ್‍ಎಕ್ಸ್ ವಿನ್ಯಾಸಗೊಳಿಸಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡಿದೆ. ಗುರುವಾರ ದಕ್ಷಿಣ ಟೆಕ್ಸಾಸ್‌ನಿಂದ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಸ್ಟಾರ್‌ಶಿಪ್ ರಾಕೆಟ್ ಸ್ಫೋಟಗೊಂಡಿದ್ದರಿಂದ ಕಕ್ಷೆ ತಲುಪಲು ವಿಫಲವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಟೆಕ್ಸಾಸ್‌ನ ಉಡಾವಣಾ ಪ್ಯಾಡ್‌ನಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ರಾಕೆಟ್ ಸ್ಫೋಟಗೊಂಡು ಗಲ್ಫ್ ಆಫ್ ಮೆಕ್ಸಿಕೋದ ಮೇಲೆ ಅಪ್ಪಳಿಸಿದೆ. ಈವರೆಗೆ ಮಾನವ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು. ಚಂದ್ರ, ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಿದ ಬಾಹ್ಯಾಕಾಶ ನೌಕೆ, ತನ್ನ ಮೊದಲ ಪ್ರಾಯೋಗಿಕ ಉಡಾವಣೆ ವೇಳೆ ಸ್ಫೋಟಗೊಂಡಿರುವುದು ಜಾಗತಿಕ ಗಗನಯಾನಿಗಳ ನಿರಾಸೆಗೆ ಕಾರಣವಾಗಿದೆ.
ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ಗುರುವಾರಬೆಳಗ್ಗೆ 8:33ಕ್ಕೆ ದೈತ್ಯ ಸ್ಟಾರ್‌ಶಿಪ್ ರಾಕೆಟ್ ಪ್ರಾಯೋಗಿಕ ಉಡಾವಣೆಗಾಗಿ ನಭಕ್ಕೆ ಜಿಗಿದಿತ್ತು. ಆದರೆ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಜಗತ್ತಿನ ಅತಿದೊಡ್ಡ 'ಸ್ಪೇಸ್‌ಎಕ್ಸ್' ರಾಕೆಟ್ ಸ್ಫೋಟಗೊಂಡಿದೆ. ಸ್ಟಾರ್‌ಶಿಪ್ ಕ್ಯಾಪ್ಸುಲ್ನ್ನು ಮೊದಲ ಹಂತದ ರಾಕೆಟ್ ಬೂಸ್ಟರ್‌ನಿಂದ 3 ನಿಮಿಷಗಳ ಕಾಲ ಸಿಬ್ಬಂದಿ ರಹಿತ ಹಾರಾಟಕ್ಕೆ ಪ್ರತ್ಯೇಕಿಸಲು ನಿಗದಿಪಡಿಸಲಾಗಿತ್ತು. ಆದರೆ ಪ್ರತ್ಯೇಕತೆಯ ಪ್ರಕ್ರಿಯೆ ವಿಫಲಗೊಂಡ ಪರಿಣಾಮ ರಾಕೆಟ್ ನಭದಲ್ಲಿ ಪತಗೊಂಡಿತು ಎಂದು ಸ್ಪೇಸ್‌ಎಕ್ಸ್ ಟ್ವೀಟ್ ಮಾಡಿದೆ. ಸ್ಫೋಟಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮೊದಲ ಪರೀಕ್ಷಾರ್ಥ ಉಡಾವಣೆ: ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಉಡಾವಣೆಗೆ ಮುಂಚಿತವಾಗಿ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದರು. ಅಲ್ಲದೇ ಪರೀಕ್ಷಾ ಹಾರಾಟದ ನಿರೀಕ್ಷೆ ಕಡಿಮೆ ಮಾಡಲು ಯತ್ನಿಸಿದರು. ಇದು ತುಂಬಾ ಅಪಾಯಕಾರಿ ಬಾಹ್ಯಾಕಾಶ ನೌಕೆಯಾಗಿದ್ದು, ಅತ್ಯಂತ ಸಂಕೀರ್ಣವಾದ ಮತ್ತು ದೈತ್ಯಾಕಾರದ ರಾಕೆಟ್‌ನ ಮೊದಲ ಪರೀಕ್ಷಾರ್ಥ ಉಡಾವಣೆಯಾಗಿದೆ" ಎಂದು ಅವರು ಹೇಳಿದ್ದರು.