ಕೇಪ್ ಕೆನವೆರಲ್ (ಅಮೆರಿಕ): ಸ್ಪೇಸ್‌ಎಕ್ಸ್ (SpaceX) ತನ್ನ ನಾಲ್ಕು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International-Space-Station) ಕಳುಹಿಸಿದೆ. ಕೆಟ್ಟ ಹವಾಮಾನ ಸೇರಿದಂತೆ ವಿವಿಧ ಅಡೆತಡೆಗಳಿಂದಾಗಿ ಮುಂದೂಡಲ್ಪಟ್ಟಿದ್ದ ಕಾರ್ಯಾಚರಣೆ ಬುಧವಾರ ರಾತ್ರಿ ಯಶಸ್ವಿಯಾಗಿ ನಡೆದಿದೆ.
ನಿಧಾನಗತಿಯ ಮಳೆ ಬೀಳುತ್ತಿದ್ದ ಕಾರಣದಿಂದಾಗಿ ನಾಲ್ವರು ಗಗನಯಾತ್ರಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅವರು 6 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇವರೆಲ್ಲ ಕಳೆಯಲಿದ್ದು, ಅವರನ್ನು ಎಲ್ಲ ತರಹದ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಇದಕ್ಕೂ ಎರಡು ದಿನ ಮೊದಲು ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸುದೀರ್ಘ ಸಮಯ ಕಳೆದು ಭೂಮಿಗೆ ವಾಪಸ್ ಆಗಿದ್ದರು. ನಾಸಾ (NASA) ಗಗನಯಾತ್ರಿಗಳಾದ ಶೇನ್ ಕಿಂಬೆರೊ ಮತ್ತು ಮೇಗನ್ ಮ್ಯಾಕ್ ಆರ್ಥರ್, ಜಪಾನ್‌ನ ಅಕಿಹಿಟೊ ಹೊಶೈಡ್ ಮತ್ತು ಫ್ರಾನ್ಸ್‌ನ ಥಾಮಸ್ ಪೆಸ್ಕ್ವೆಟ್ ಎರಡು ದಿನಗಳ ಹಿಂದೆ ಸ್ಪೇಸ್‌ಎಕ್ಸ್ (SpaceX) ಕ್ಯಾಪ್ಸುಲ್‌ನಿಂದ ಭೂಮಿಗೆ ಮರಳಿದರು. ಬಾಹ್ಯಾಕಾಶ ಕೇಂದ್ರದಲ್ಲಿ 200 ದಿನಗಳನ್ನು ಕಳೆದ ನಂತರ ಅವರು ಹಿಂತಿರುಗಿದ್ದರು. ಅವರ ಯಶಸ್ವಿ ಆಗಮನದ ಬಳಿಕ ನಾಲ್ವರು ಹೊಸ ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗಿದೆ.