ಕೇಪ್ ಕ್ಯಾನವೆರಲ್ (ಫ್ಲೋರಿಡಾ, ಯುಎಸ್‌ಎ): ಸ್ಪೇಸ್‌ಎಕ್ಸ್ ಗುರುವಾರ NASA ಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ಕು ಗಗನಯಾತ್ರಿಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ ಮೊದಲ ಬಾರಿಗೆ ಅರಬ್ನ ವ್ಯಕ್ತಿಯೊಬ್ಬರು ತಿಂಗಳುಗಳ ಕಾಲ ಅಲ್ಲಿ ಉಳಿಯಲಿದ್ದಾರೆ. ಫಾಲ್ಕನ್ ರಾಕೆಟ್ ಮಧ್ಯರಾತ್ರಿಯ ಸ್ವಲ್ಪ ಸಮಯದ ನಂತರ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸುಮಾರು 80 ಪ್ರೇಕ್ಷಕರು ಉಡಾವಣಾ ಸ್ಥಳದಲ್ಲಿ ಹಾಜರಿದ್ದರು. ಎಮಿರೇಟ್ಸ್ನಿಂದ ಗಗನಕ್ಕೆ ಹಾರುತ್ತಿರುವ ಎರಡನೇ ಗಗನಯಾತ್ರಿಯಾಗಿರುವ ಸುಲ್ತಾನ್ ಅಲ್-ನೆಯಾದಿ ಬಾಹ್ಯಾಕಾಶಕ್ಕೆ ತೆರಳುವುದನ್ನು ನೋಡಲು ಇವರೆಲ್ಲ ಆಗಮಿಸಿದ್ದರು. ಸುಲ್ತಾನ್ ಅಲ್-ನೆಯಾದಿ 6 ತಿಂಗಳು ಬಾಹ್ಯಾಕಾಶದಲ್ಲಿರಲಿದ್ದಾರೆ. ಪ್ರಪಂಚದ ಮತ್ತೊಂದು ಮೂಲೆಯಲ್ಲಿರುವ ದುಬೈನಲ್ಲಿ ಮತ್ತು ಸಂಪೂರ್ಣ ಯುಎಇಯಲ್ಲಿ ಶಾಲೆಗಳು ಮತ್ತು ಕಚೇರಿಗಳಲ್ಲಿ ಉಡಾವಣೆಯ ನೇರ ಪ್ರಸಾರ ಮಾಡಲಾಯಿತು.
ಈಗಾಗಲೇ ಮೂರು ಬಾರಿ ಬಾಹ್ಯಾಕಾಶ ಸವಾರಿ ಮಾಡಿರುವ ನಿವೃತ್ತ ನೇವಿ ಸಬ್ ಮರೈನರ್ ಸ್ಟೀಫನ್ ಬೊವೆನ್ ಮತ್ತು ಪ್ರಥಮ ಬಾರಿಗೆ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಜಿ ಸಂಶೋಧನಾ ವಿಜ್ಞಾನಿ ವಾರೆನ್ ಹೂಡಿ ಹೋಬರ್ಗ್ ಮತ್ತು ರಷ್ಯಾ ಏರ್ ಪೋರ್ಸ್ನ ನಿವೃತ್ತ ಅಧಿಕಾರಿ ಆ್ಯಂಡ್ರೆ ಫೆಡಿಯೆವ್ ಬಾಹ್ಯಾಕಾಶಕ್ಕೆ ತೆರಳಿದ ಉಳಿದ ಮೂವರು ಗಗನಯಾತ್ರಿಗಳಾಗಿದ್ದಾರೆ.
ಕಕ್ಷೆಗೆ ಸ್ವಾಗತ ಎಂದು ಸ್ಪೇಸ್‌ಎಕ್ಸ್ ಲಾಂಚ್ ಕಂಟ್ರೋಲ್ ರೇಡಿಯೊ ಸಂದೇಶ ಬಿತ್ತರಿಸಿತು. ಡ್ರ್ಯಾಗನ್ ಕ್ಯಾಪ್ಸೂಲ್ ಎಂದು ಕರೆಯಲಾಗುವ ರಾಕೆಟ್ ಮೂಲಕ ಗಗನಯಾತ್ರಿಗಳು ಬಾಹ್ಯಾಕಾಶದತ್ತ ಪಯಣಿಸಿದರು. ನಾಲ್ಕು ವರ್ಷಗಳ ಹಿಂದೆ ಸರಿಯಾಗಿ ಇದೇ ದಿನದಂದು ಡ್ರ್ಯಾಗನ್ ಕ್ಯಾಪ್ಸೂಲ್ ಪ್ರಥಮ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿತ್ತು. ನಿಮ್ಮ ಸವಾರಿಯನ್ನು ನೀವು ಆನಂದಿಸಿದ್ದರೆ, ದಯವಿಟ್ಟು ನಮಗೆ ಫೈವ್ ಸ್ಟಾರ್ ರೇಟಿಂಗ್ ನೀಡಿ ಎಂದು ರೇಡಿಯೊ ಸಂದೇಶ ಬಿತ್ತರಿಸಿತು. ಎಂಜಿನ್ ಇಗ್ನಿಷನ್ ಸಿಸ್ಟಮ್‌ನಲ್ಲಿ ಫಿಲ್ಟರ್ ಮುಚ್ಚಿ ಹೋಗಿದ್ದರಿಂದ ಸೋಮವಾರ ಆರಂಭವಾಗಬೇಕಿದ್ದ ಪಯಣವನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.
ಅಕ್ಟೋಬರ್ನಲ್ಲಿ ಅಮೆರಿಕ,ರಷ್ಯಾ- ಜಪಾನ್ ಗಗನಯಾತ್ರಿಗಳು ವಾಪಸ್:ಈಗ ಬಾಹ್ಯಾಕಾಶಕ್ಕೆ ತೆರಳಿದ ಗಗನಯಾತ್ರಿಗಳು ಅಕ್ಟೋಬರ್‌ನಿಂದ ಅಲ್ಲಿರುವ ಅಮೆರಿಕ -ರಷ್ಯನ್-ಜಪಾನೀಸ್ ಸಿಬ್ಬಂದಿಯನ್ನು ಭೂಮಿಗೆ ಕಳುಹಿಸಿ, ಅವರ ಸ್ಥಾನದಲ್ಲಿ ಉಳಿಯಲಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವ ಇತರ ಇಬ್ಬರು ರಷ್ಯನ್ನರು ಮತ್ತು ಒಬ್ಬ ಅಮೇರಿಕನ್ ಆಗಿದ್ದಾರೆ. ಅವರ ಸೂಯೆಜ್ ಕ್ಯಾಪ್ಸೂಲ್ನಲ್ಲಿ ಸೋರಿಕೆ ಕಂಡು ಬಂದಿದ್ದರಿಂದ ಅವರ ಆರು ತಿಂಗಳ ವಾಸ್ತವ್ಯವನ್ನು ಸೆಪ್ಟೆಂಬರ್ ವರೆಗೆ ದ್ವಿಗುಣಗೊಳಿಸಲಾಯಿತು. ಕಳೆದ ವಾರ ಸೂಯೆಜ್ ಬದಲಿಗೆ ಮತ್ತೊಂದು ಕ್ಯಾಪ್ಸೂಲ್ ಕಳುಹಿಸಲಾಗಿತ್ತು. ಬಾಹ್ಯಾಕಾಶಕ್ಕೆ ತೆರಳಿದ ಅಲ್-ನೆಯಾದಿ ಕಮ್ಯೂನಿಕೇಶನ್ ಎಂಜಿನಿಯರ್ ಆಗಿದ್ದಾರೆ.
ಯುಎಇಯ ಸಾರ್ವಜನಿಕ ಶಿಕ್ಷಣ ಮತ್ತು ಸುಧಾರಿತ ತಂತ್ರಜ್ಞಾನದ ಸಚಿವ ಸಾರಾ ಅಲ್-ಅಮಿರಿ ಮಾತನಾಡಿ, ಈ ಸುದೀರ್ಘ ಮಿಷನ್ ದೇಶಕ್ಕೆ ವಿಜ್ಞಾನ ಮತ್ತು ವೈಜ್ಞಾನಿಕ ಆವಿಷ್ಕಾರಕ್ಕೆ ನಮಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದರು. ನಾವು ಬಾಹ್ಯಾಕಾಶಕ್ಕೆ ಹೋಗಿ ಏನೂ ಮಾಡದೇ ಸುಮ್ಮನಿರಲು ಬಯಸುವುದಿಲ್ಲ ಎಂದು ದುಬೈನಲ್ಲಿರುವ ಯುಎಇಯ ಬಾಹ್ಯಾಕಾಶ ಕೇಂದ್ರದ ಡೈರೆಕ್ಟರ್ ಜನರಲ್ ಸೇಲಂ ಅಲ್-ಮರ್ರಿ ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೋ ಉಪಗ್ರಹಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ತಯಾರಿಸಿದ ಚಿಪ್ ಅಳವಡಿಕೆ!