ಕ್ಯಾಲಿಪೋರ್ನಿಯಾ( ಅಮೆರಿಕ): ಮಾನವ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಿದೆ. ಸ್ಪೇಸ್ಎಕ್ಸ್ (SpaceX) ಕಂಪನಿಯ ಖಾಸಗಿ ಫ್ಲೈಟ್ ಕೆನಡಿ ಬಾಹ್ಯಾಕಾಶ ಕೇಂದ್ರದ ಪ್ಯಾಡ್ 39A ಇಂದ ನಭಕ್ಕೆ ಜಿಗಿದಿದೆ. ಓರ್ವ ಉದ್ಯಮಿ, ಆರೋಗ್ಯ ಕಾರ್ಯಕರ್ತೆ, ಮತ್ತಿಬ್ಬರು ಬುಧವಾರ ರಾತ್ರಿ Inspiration-4 ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ವಿಶ್ವದ ಕುತೂಹಲ ಹುಟ್ಟುಹಾಕಿದ್ದ, ಬಹುನಿರೀಕ್ಷಿತ ಯೋಜನೆ ಇದಾಗಿದ್ದು, ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದವರು ಎಲ್ಲರೂ ಕೂಡಾ, ವೃತ್ತಿಪರ ಬಾಹ್ಯಾಕಾಶಯಾನಿಗಳಲ್ಲ ಎಂಬುದು ವಿಶೇಷವಾಗಿದೆ. ಈಗ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ.
ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ನಿಂದ ಸುಮಾರು 100 ಮೈಲಿ (160 ಕಿಲೋಮೀಟರ್) ದೂರಕ್ಕೆ ತೆರಳಲಿರುವ ಇವರು, ಅಲ್ಲಿ ಮೂರು ದಿನ ನೆಲೆಸಲಿದ್ದಾರೆ. ಅಂದರೆ ಸಾಮಾನ್ಯವಾಗಿ ಮೂರು ದಿನ ಭೂಮಿಯನ್ನು ಸುತ್ತುಹಾಕಲಿದ್ದಾರೆ.
ಬಾಹ್ಯಾಕಾಶಕ್ಕೆ ತೆರಳಿರುವ ವ್ಯಕ್ತಿಗಳು..
ಮೊದಲಿಗೆ ಬಾಹ್ಯಾಕಾಶಕ್ಕೆ ತೆರಳಲು ಸ್ಪರ್ಧೆ ಹೆಚ್ಚಾಗಿಯೇ ಇತ್ತು. ಇದಕ್ಕೂ ಮೊದಲು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ವರ್ಜಿನ್ ಗ್ಯಾಲಕ್ಟಿಕ್ಸ್ನ ರಿಚರ್ಡ್ ಬ್ರಾನ್ಸನ್ ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಿದ್ದರು. ಇವರೊಂದಿಗೆ ವೃತ್ತಿಪರ ಗಗನಯಾತ್ರಿಗಳೂ ಇದ್ದರು.
ಈಗ ಮತ್ತೋರ್ವ ಉದ್ಯಮಿ ಬಾಹ್ಯಾಕಾಶಕ್ಕೆ ತೆರಳಿದ್ದು, ಅವರ ಹೆಸರು ಜರೇಡ್ ಐಸಾಕ್ಮನ್ (38), ವೇತನ ಪಾವತಿ ಪ್ರಕ್ರಿಯೆ ನಡೆಸುವ ಕಂಪನಿಯೊಂದರ ಸಂಸ್ಥಾಪಕರು ಇವರಾಗಿದ್ದಾರೆ. ಇವರೊಂದಿಗೆ ಬಾಲ್ಯದಲ್ಲಿಯೇ ಕ್ಯಾನ್ಸರ್ನಿಂದ ಗುಣಮುಖರಾದ, ಆರೋಗ್ಯ ಕಾರ್ಯಕರ್ತರಾದ ಹೈಲೆ ಹರ್ಕೆನಿಕ್ಸ್ (29) ಜೊತೆಯಾಗಿದ್ದಾರೆ.
ಈ ಇಬ್ಬರ ಜೊತೆಗೆ ಸ್ವೀಪ್ಟೇಕ್ಸ್ (Sweepstakes) ಎಂಬ ಸ್ಪರ್ಧೆಯಲ್ಲಿ ಜಯಗಳಿಸಿದ್ದ ವಾಷಿಂಗ್ಟನ್ನಲ್ಲಿ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಕ್ರಿಸ್ ಸೆಂಬ್ರೊಸ್ಕಿ (42) ಹಾಗೂ ಅರಿಜೋನಾದ ಸಮುದಾಯ ಕಾಲೇಜೋಂದರ ಎಜುಕೇಟರ್ ಸಿಯಾನ್ ಪ್ರಾಕ್ಟರ್ (51) ಎಂಬುವವರೂ ಇದ್ದಾರೆ.
ಅಪರೂಪದ ಬಾಹ್ಯಾಕಾಶ ಯಾನ..
ಬಾಹ್ಯಾಕಾಶಯಾನ ಮಾಡುತ್ತಿರುವ ಹೈಲೆ ಹರ್ಕೆನಿಕ್ಸ್ ಅವರು ಪ್ರೊಸ್ತೆಸಿಸ್ (Prosthesis) ಎಂಬ ಸಮಸ್ಯೆಯಿಂದ ಬಳಲುತ್ತಿದ್ದ, ಅವರ ಎಡಗಾಲಿನಲ್ಲಿ ಟೈಟಾನಿಯಂ ರಾಡ್ ಅನ್ನು ಅಳವಡಿಸಲಾಗಿದೆ. ಇಂತಹ ಸಮಸ್ಯೆಯನ್ನು ಹೊಂದಿಯೂ ಬಾಹ್ಯಾಕಾಶ ಪ್ರವಾಸ ಮಾಡುತ್ತಿರುವ ಅಮೆರಿಕನ್ ವ್ಯಕ್ತಿಗಳಲ್ಲಿ ಇವರು ಅತ್ಯಂತ ಕಿರಿಯರಾಗಿದ್ದಾರೆ.
ಇನ್ನು ಸ್ಪೇಸ್ ಎಕ್ಸ್ ಕಂಪನಿಯು AX-1 ಮಿಷನ್ ಅನ್ನು 2021ರ ಅಂತ್ಯಕ್ಕೆ ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಾಲ್ಕು ಖಾಸಗಿ ಗಗನಯಾತ್ರಿಗಳು ಎಂಟು ದಿನಗಳ ಕಾಲ ಬಾಹ್ಯಾಕಾಶ ಸಂಚಾರ ನಡೆಸಲಿದ್ದು, ತಲಾ 55 ಮಿಲಿಯನ್ ಡಾಲರ್ ಪಾವತಿಬೇಕಾಗುತ್ತದೆ.
ಇದನ್ನೂ ಓದಿ:ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ, ದೀದಿ: ಪಟ್ಟಿಯಲ್ಲೊಂದು ಅಚ್ಚರಿಯ ಹೆಸರು!