ನವದೆಹಲಿ : ಎಲೋನ್ ಮಸ್ಕ್ ನೇತೃತ್ವದ SpaceX ಸದ್ಯ ಜಾಗತಿಕ ಉಪಗ್ರಹ ಉಡಾವಣಾ ವ್ಯವಹಾರದಲ್ಲಿ ಶೇ 60 ರಷ್ಟು ಪಾಲು ಪಡೆದುಕೊಂಡಿದೆ. ಏತನ್ಮಧ್ಯೆ ಕಡಿಮೆ ಕಕ್ಷೆಯ ಉಪಗ್ರಹಗಳ ಮೂಲಕ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕಗಳನ್ನು ಒದಗಿಸುವ ತಮ್ಮ ಸ್ಟಾರ್‌ಲಿಂಕ್ ಕಾರ್ಯಾಚರಣೆಯನ್ನು ಭಾರತಕ್ಕೆ ವಿಸ್ತರಿಸಲು ಮಸ್ಕ್ ಬಯಸುತ್ತಿದ್ದಾರೆ. ಈ ವರ್ಷ ಕಂಪನಿಯು ಈಗಾಗಲೇ ಜೂನ್‌ವರೆಗೆ 1,000 ಕ್ಕೂ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಪೇಸ್ ಎಕ್ಸ್ ಈಗ ವಿಶ್ವದಾದ್ಯಂತ ಉಡಾವಣೆಯಾದ ಶೇಕಡಾ 60 ಕ್ಕಿಂತ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ ಎಂದು ಹಾರ್ವರ್ಡ್ ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನ ಖಗೋಳ ಭೌತಶಾಸ್ತ್ರಜ್ಞ ಜೊನಾಥನ್ ಮೆಕ್‌ಡೊವೆಲ್ ಹೇಳಿದ್ದಾರೆ. ಸ್ಪೇಸ್‌ಎಕ್ಸ್ 2019 ರಿಂದ ಈವರೆಗೆ ಸುಮಾರು 5,000 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ ಮತ್ತು ಒಟ್ಟು 42,000 ಕಾರ್ಯಾಚರಣೆಗಳ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಒಂದು ಸ್ಪೇಸ್ ಎಕ್ಸ್ ರಾಕೆಟ್ ಒಂದೇ ಬಾರಿಗೆ 60 ಉಪಗ್ರಹಗಳನ್ನು ಹೊತ್ತೊಯ್ಯಬಲ್ಲದು.
ಕಳೆದ ತಿಂಗಳು ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮಸ್ಕ್, ಸೌರಶಕ್ತಿ ವಲಯದಲ್ಲಿ ಹೂಡಿಕೆಗೆ ಭಾರತ ಉತ್ತಮ ದೇಶವಾಗಿದೆ ಎಂದು ಹೇಳಿದ್ದರು. “ಸೌರಶಕ್ತಿ ಹೂಡಿಕೆಗೆ ಭಾರತ ಉತ್ತಮವಾಗಿದೆ. ಸ್ಟಾರ್‌ಲಿಂಕ್ ಇಂಟರ್ನೆಟ್ ಅನ್ನು ಭಾರತಕ್ಕೆ ತರಲು ನಾವು ಆಶಿಸುತ್ತಿದ್ದೇವೆ. ನಾನು ಭಾರತದ ಭವಿಷ್ಯದ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೇನೆ. ವಿಶ್ವದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚು ಭರವಸೆದಾಯಕ ದೇಶವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದರು.