ಬಾಹ್ಯಾಕಾಶ ಯೋಜನೆಗಳ ವಿಷಯದಲ್ಲಿ ಭಾರತವು ಅತ್ಯುನ್ನತ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ಸಂಪರ್ಕ ಸಾಧನೆಗೆ, ಭೂಮಿ ಮತ್ತು ಸಾಗರ ಸಂಪನ್ಮೂಲಗಳ ಮೇಲೆ ಕಣ್ಗಾವಲಿಡಲು, ಸಂಚರಣೆ ಮತ್ತು ಹವಾಮಾನ ಅಧ್ಯಯನಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಉಪಗ್ರಹಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಕೈಗಾರಿಕೆಗಳ ವಾಣಿಜ್ಯ ಪ್ರಾಮುಖ್ಯತೆಯಿಂದಾಗಿ 'ಬಾಹ್ಯಾಕಾಶ ಆರ್ಥಿಕತೆ'ಯು ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ. ಸಾಂಪ್ರದಾಯಿಕ ಸರ್ಕಾರಿ ಏಕಸ್ವಾಮ್ಯದಿಂದ ಹೊರಬಂದು, ಕಾರ್ಪೊರೇಟ್ ವಲಯವು ಬಾಹ್ಯಾಕಾಶ ಪರಿಶೋಧನೆ ಉಪಕ್ರಮಗಳನ್ನು ಕ್ರಮೇಣ ಮುನ್ನಡೆಸುತ್ತಿರುವುದು ಕುತೂಹಲಕಾರಿಯಾಗಿದೆ.
2020 ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಸುಧಾರಣೆಗಳನ್ನು ಅನಾವರಣಗೊಳಿಸಿದ್ದರು. ಬಾಹ್ಯಾಕಾಶ ವಾಹಕಗಳು, ಉಪಗ್ರಹಗಳು ಮತ್ತು ಇತರ ಲಾಭದಾಯಕ ಉದ್ಯಮಗಳಲ್ಲಿ ಗಮನಾರ್ಹ ಪಾಲನ್ನು ಹೊಂದಿರುವ ಖಾಸಗಿ ಉದ್ಯಮಗಳನ್ನು ಈಗ ಬಾಹ್ಯಾಕಾಶ ಪ್ರಾಬಲ್ಯದ ಭಾರತದ ಅನ್ವೇಷಣೆಯಲ್ಲಿ 'ಸಹವರ್ತಿಗಳು' ಎಂದು ಗುರುತಿಸಲಾಗಿದೆ. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಸರಿಸುಮಾರು 40,000 ಕೋಟಿ ಯುಎಸ್ ಡಾಲರ್ಗೆ ಏರಿಕೆಯಾಗಿದ್ದು, ಪ್ರಸ್ತುತ ಇದರಲ್ಲಿ ಭಾರತದ ಪಾಲು ಸಾಧಾರಣ ಎನ್ನುವಷ್ಟು ಶೇಕಡಾ 2ರಷ್ಟು ಮಾತ್ರ ಆಗಿದೆ. ಈ ಅಂತರವನ್ನು ಕಡಿಮೆ ಮಾಡಲು, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲನ್ನು ಶೀಘ್ರದಲ್ಲೇ ಮಹತ್ವಾಕಾಂಕ್ಷೆಯ ಶೇಕಡಾ 10ಕ್ಕೆ ಏರಿಸುವ ಗುರಿಯೊಂದಿಗೆ ಸಮಗ್ರ ಸುಧಾರಣೆಗಳನ್ನು ಪ್ರಾರಂಭಿಸಲಾಗಿದೆ.
ಬಂಡವಾಳ ಕೊರತೆಯೇ ಪ್ರಮುಖ ಅಡಚಣೆ: ವಾಹಕಗಳು ಅಥವಾ ರಾಕೆಟ್ಗಳು ಮತ್ತು ಉಪಗ್ರಹಗಳು ವಾಣಿಜ್ಯ ಬಾಹ್ಯಾಕಾಶ ವ್ಯವಸ್ಥೆಯ ಕೇಂದ್ರ ಬಿಂದುವಾಗಿವೆ. ಇವು ಬಾಹ್ಯಾಕಾಶಕ್ಕೆ ನಮ್ಮ ಹೆಜ್ಜೆಗಳನ್ನು ಮುನ್ನಡೆಸುವಲ್ಲಿ ಅಗತ್ಯ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ಗಡಿಯೊಳಗೆ ಪಿಎಸ್ಎಲ್ವಿ, ಜಿಎಸ್ಎಲ್ವಿ ಮತ್ತು ಎಸ್ಎಸ್ಎಲ್ವಿ ಸೇರಿದಂತೆ ಉಪಗ್ರಹ ವಾಹಕಗಳು ಜಾಗತಿಕವಾಗಿ ಸ್ಪರ್ಧಾತ್ಮಕ ವೆಚ್ಚದಲ್ಲಿ ಸೇವೆ ನೀಡುತ್ತಿವೆ.
ಈ ವಾಹಕಗಳು, ಉಪಗ್ರಹಗಳ ಜೊತೆಗೆ ಸಂವಹನ, ಭೂ ವೀಕ್ಷಣೆ, ಹವಾಮಾನ ಅಧ್ಯಯನಗಳು, ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (ನಾವಿಕ್) ಮತ್ತು ವೈಜ್ಞಾನಿಕ ಸಂಶೋಧನೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮೂರರಿಂದ ಐದನೇ ಶ್ರೇಯಾಂಕದವರೆಗೆ ಉತ್ಕೃಷ್ಟ ಜಾಗತಿಕ ಶ್ರೇಯಾಂಕಗಳನ್ನು ಹೊಂದಿವೆ. ಐತಿಹಾಸಿಕವಾಗಿ ಈ ಪ್ರಯತ್ನಗಳು ಸರ್ಕಾರಿ ವಲಯಕ್ಕೆ ಮಾತ್ರ ಸೀಮಿತವಾಗಿದ್ದವು. ಆದಾಗ್ಯೂ, ರಾಕೆಟ್ ಮತ್ತು ಉಪಗ್ರಹ ನಿರ್ಮಾಣಕ್ಕೆ ಅಗತ್ಯವಾದ ಯಾಂತ್ರಿಕ ಮತ್ತು ವಿದ್ಯುತ್ ಘಟಕಗಳ ಅಭಿವೃದ್ಧಿಗೆ ಕೊಡುಗೆ ನೀಡಲು 500 ಕ್ಕೂ ಹೆಚ್ಚು ವಾಣಿಜ್ಯ ಉದ್ಯಮಗಳು ಇಸ್ರೋದೊಂದಿಗೆ ಸಹಕರಿಸುವುದರೊಂದಿಗೆ ಒಂದು ವಿಶಿಷ್ಟ ಬದಲಾವಣೆ ಈ ವಲಯದಲ್ಲಿ ಕಂಡುಬಂದಿದೆ.
90 ಪ್ರತಿಶತ ಉಪಗ್ರಹ ವಾಹಕಗಳು ಮತ್ತು 55 ಪ್ರತಿಶತಕ್ಕೂ ಹೆಚ್ಚು ಉಪಗ್ರಹಗಳನ್ನು ನಿರ್ಮಿಸುವ ಮೂಲಕ ಖಾಸಗಿ ಉದ್ಯಮಗಳು ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿವೆ. ಇಸ್ರೋ 363 ತಂತ್ರಜ್ಞಾನಗಳನ್ನು 250 ಕ್ಕೂ ಹೆಚ್ಚು ಖಾಸಗಿ ಕಂಪನಿಗಳಿಗೆ ವ್ಯೂಹಾತ್ಮಕವಾಗಿ ವರ್ಗಾಯಿಸಿರುವುದು ಈ ಮಹತ್ವದ ಪ್ರಗತಿಗೆ ಕಾರಣವಾಗಿದೆ. ಪರಿಣಾಮವಾಗಿ, ವಿವಿಧ ರಂಗಗಳಲ್ಲಿ ಗಮನಾರ್ಹ ಪ್ರಗತಿ ಸ್ಪಷ್ಟವಾಗಿದೆ; ರಾಕೆಟ್ ತಯಾರಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಸ್ಕೈರೂಟ್ ಮತ್ತು ಅಗ್ನಿಕುಲ್ ಕಾಸ್ಮೋಸ್ ನಿಂದ ಹಿಡಿದು ಅನಂತ್ ಟೆಕ್ನಾಲಜೀಸ್, ಗ್ಯಾಲಕ್ಸಿ ಐ ಸ್ಪೇಸ್, ಧ್ರುವ ಸ್ಪೇಸ್, ಪಿಕ್ಸೆಲ್, ಸ್ಪೇಸ್ ಕಿಡ್ಜ್ ಇಂಡಿಯಾ ಉಪಗ್ರಹ ತಯಾರಿಕೆಯಲ್ಲಿ ಮುನ್ನಡೆಯುತ್ತಿವೆ.
ಇದಲ್ಲದೆ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಮತ್ತು ದಿಗಂತದಂತಹ ಕಂಪನಿಗಳು ಸಂಬಂಧಿತ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿವೆ. ಆದಾಗ್ಯೂ, ಬಾಹ್ಯಾಕಾಶ ಸಂಶೋಧನೆಯು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ಇದನ್ನು ಸರ್ಕಾರ ನಿಯಂತ್ರಿಸುವುದು ಅನಿವಾರ್ಯ. ಜಾಗತಿಕ ಆರ್ಥಿಕತೆಯಲ್ಲಿ ನಮ್ಮ ಪಾಲನ್ನು ಹೆಚ್ಚಿಸಲು ಈ ಸಹಯೋಗವು ನಿರ್ಣಾಯಕವಾಗಿದ್ದರೂ, ಉಪಗ್ರಹ ಮತ್ತು ರಾಕೆಟ್ ಉತ್ಪಾದನೆಯ ಪ್ರಮಾಣವು ಇಸ್ರೋದ ವ್ಯಾಪ್ತಿಯನ್ನು ಮೀರಿ ಸಹಯೋಗದ ಯೋಜನೆಗಳನ್ನು ಜಾರಿಗೊಳಿಸುವುದು ಅಗತ್ಯ.