ಬೆಂಗಳೂರು:''ಭಾರತದ ಆದಿತ್ಯ-ಎಲ್1 ಉಪಗ್ರಹದಲ್ಲಿ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪೆರಿಮೆಂಟ್ ಪೇಲೋಡ್ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಉಪಕರಣವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ'' ಎಂದು ಇಸ್ರೋ ಶನಿವಾರ ತಿಳಿಸಿದೆ. ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C57) ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.
ಆದಿತ್ಯ-L1 ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯನ ಹತ್ತಿರವಿರುವ ಲಗ್ರಾಂಜಿಯನ್ ಪಾಯಿಂಟ್ (L1) ಅನ್ನು ತಲುಪಲಿದೆ. ನಂತರ, ಹಾಲೋ ಕಕ್ಷೆಯಿಂದ ಸುತ್ತುವ ಮೂಲಕ ಸೂರ್ಯನನ್ನು ಅಧ್ಯಯನ ಮಾಡಿದ ಮೊದಲ ಭಾರತೀಯ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ ಆಗಲಿದೆ.
''ಆದಿತ್ಯ ಸೋಲಾರ್ ವಿಂಡ್ ಕಣಗಳ ಎಕ್ಸ್‌ಪೆರಿಮೆಂಟ್ ಪೇಲೋಡ್ (ASPEX), ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟ್ರೋಮೀಟರ್ (ಎಸ್ಡಬ್ಲ್ಯೂಐಎಸ್) ಎಂಬ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿದೆ. ಸುಪ್ರಾಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (ಎಸ್ಟಿಇಪಿಎಸ್) ಉಪಕರಣವು ಸೆಪ್ಟೆಂಬರ್ 10, 2023ರಂದು ಕಾರ್ಯನಿರ್ವಹಿಸುತ್ತಿದೆ. ಎಸ್ಡಬ್ಲ್ಯೂಐಎಸ್ ಉಪಕರಣವನ್ನು ನವೆಂಬರ್ 2, 2023 ರಂದು ಸಕ್ರಿಯಗೊಳಿಸಲಾಗಿದೆ. ಈ ಉಪಕರಣಗಳು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೌರ ಮಾರುತದ ಕುರಿತು ಸಮಗ್ರ ಸ್ನ್ಯಾಪ್‌ಶಾಟ್:"ಎಸ್ಡಬ್ಲ್ಯೂಐಎಸ್ ಉಪಕರಣ 360 ಡಿಗ್ರಿಯಲ್ಲಿ ತಿರುಗಬಲ್ಲ ಸಾಮರ್ಥ್ಯ ಹೊಂದಿರುವ ಎರಡು ಸೆನ್ಸಾರ್ಗಳನ್ನು ಹೊಂದಿದೆ. ಅದು ಲಂಬ ಕೋನದಲ್ಲಿ ಕೆಲಸ ಮಾಡುತ್ತವೆ. ಈ ಉಪಕರಣವು ಸೌರ ಮಾರುತದ ಅಯಾನುಗಳನ್ನು, ಪ್ರಾಥಮಿಕವಾಗಿ ಪ್ರೋಟಾನ್‌ಗಳು ಮತ್ತು ಆಲ್ಫಾ ಕಣಗಳನ್ನು ಯಶಸ್ವಿಯಾಗಿ ಅಳೆಯುತ್ತದೆ. ನವೆಂಬರ್ 2023ರಲ್ಲಿ ಎರಡು ಸಂವೇದಕಗಳಲ್ಲಿ ಒಂದರಿಂದ ಸ್ವಾಧೀನಪಡಿಸಿಕೊಂಡಿರುವ ಮಾದರಿ ಶಕ್ತಿ ಹಿಸ್ಟೋಗ್ರಾಮ್ ಪ್ರೋಟಾನ್ ಮತ್ತು ಆಲ್ಫಾ ಕಣಗಳ (ಡಬಲ್ ಅಯಾನೀಕೃತ ಹೀಲಿಯಂ, He2+) ಮಾಪನಗಳಲ್ಲಿನ ವ್ಯತ್ಯಾಸಗಳನ್ನು ವಿವರಿಸುತ್ತದೆ. ಜೊತೆಗೆ ಸೌರ ಮಾರುತದ ಕುರಿತು ಸಮಗ್ರ ಸ್ನ್ಯಾಪ್‌ಶಾಟ್ ಅನ್ನು ಒದಗಿಸುತ್ತದೆ" ಎಂದು ಇಸ್ರೋ ಸಂಸ್ಥೆ ಹೇಳಿದೆ.
ಎಸ್ಡಬ್ಲ್ಯೂಐಎಸ್ ಉಪಕರಣವು ಸೌರ ಮಾರುತ ಪ್ರೋಟಾನ್‌ಗಳು ಮತ್ತು ಆಲ್ಫಾಗಳ ನಿಖರವಾದ ಅಳೆಯಲು ಸಹಾಯ ಮಾಡುತ್ತದೆ. ಸೌರ ಮಾರುತದ ಗುಣಲಕ್ಷಣಗಳು, ಆಧಾರವಾಗಿರುವ ಪ್ರಕ್ರಿಯೆಗಳು ಮತ್ತು ಭೂಮಿಯ ಮೇಲೆ ಅವುಗಳ ಪ್ರಭಾವದ ಬಗ್ಗೆ ಇದ್ದ ದೀರ್ಘಕಾಲದ ಪ್ರಶ್ನೆಗಳನ್ನು ಪರಿಹರಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಇಸ್ರೋ ವಿವರಿಸಿದೆ.
"ಎಸ್ಡಬ್ಲ್ಯೂಐಎಸ್ ಉಪಕರಣ ಗಮನಿಸಿದಂತೆ ಪ್ರೋಟಾನ್ ಮತ್ತು ಆಲ್ಫಾ ಕಣಗಳ ಸಂಖ್ಯೆಯ ಅನುಪಾತದಲ್ಲಿನ ಬದಲಾವಣೆಯು ಸೂರ್ಯ-ಭೂಮಿಯ ಲ್ಯಾಗ್ರೇಂಜ್ ಪಾಯಿಂಟ್ L1 ನಲ್ಲಿ ಕರೋನಲ್ ಮಾಸ್ ಎಜೆಕ್ಷನ್‌ಗಳ (ಸಿಎಂಇ) ಆಗಮನದ ಬಗ್ಗೆ ಪರೋಕ್ಷ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ:'ಆದಿತ್ಯ-ಎಲ್ 1' ಬಾಹ್ಯಾಕಾಶ ನೌಕೆ ಅಂತಿಮ ಹಂತ ತಲುಪಿದೆ: ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್