ನವದೆಹಲಿ:ಸೂರ್ಯನ ಕೌತುಕವನ್ನು ಅರಿಯಲು ಕೈಗೊಂಡಿರುವ ಮೊದಲ ಸೌರಯಾನ ಮಿಷನ್ ಆದಿತ್ಯ ಎಲ್ 1 ಭೂಮಿಯ ಪ್ರಭಾವ ಗೋಳದಿಂದ ಯಶಸ್ವಿಯಾಗಿ ಹೊರಚಿಮ್ಮಿದೆ. ಅದು ಈಗ ಸೂರ್ಯ ಮತ್ತು ಭೂಮಿಯ ಲಾಂಗ್ರೇಜ್ ಪಾಯಿಂಟ್ 1 ರ ಕಡೆಗೆ ಪಯಣ ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ತಿಳಿಸಿದೆ.
ಭಾರತದ ಮೊದಲ ಸೌರ ಮಿಷನ್ ಆಗಿರುವ ಆದಿತ್ಯ ಎಲ್ 1 ನೌಕೆಯು ಭೂಮಿಯಿಂದ 9.2 ಲಕ್ಷ ಕಿಲೋ ಮೀಟರ್ ದೂರ ಸಾಗಿದೆ. ಎಲ್ 1 ಪಾಯಿಂಟ್ನತ್ತ ನ್ಯಾವಿಗೇಟ್ ಆಗುತ್ತಿದೆ ಎಂದು ಇಸ್ರೋ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಮಾಹಿತಿ ಹಂಚಿಕೊಂಡಿದೆ.
ಇಸ್ರೋ ಈ ಮೊದಲು ಉಡ್ಡಯನ ಮಾಡಿರುವ ಮಾಡಿದ್ದ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಭೂಮಿಯ ಪ್ರಭಾವ ಗೋಳದಿಂದ ಯಶಸ್ವಿಯಾಗಿ ಹೊರಗೆ ಕಳುಹಿಸಿತ್ತು. ಇದೀಗ ಆದಿತ್ಯ ಎಲ್1 ನೌಕೆಯೂ ಹೊರ ಚಿಮ್ಮಿದ್ದು, ಎರಡನೇ ಪ್ರಯತ್ನವಾಗಿದೆ. ಸೆಪ್ಟೆಂಬರ್ 19 ರಂದು ಮುಂಜಾನೆ ಬಾಹ್ಯಾಕಾಶ ನೌಕೆಯ 5ನೇ ಹಂತದ ಕಕ್ಷೆಯನ್ನು ಬದಲಾವಣೆ ಪ್ರಕ್ರಿಯೆಯ ಬಳಿಕ ಈಗ ಯಶಸ್ವಿಯಾಗಿ ಭೂಮಿಯ ಪ್ರಭಾವದಿಂದ ಬೇರ್ಪಡಿಸಲಾಗಿದೆ.
ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳವಾದ ಲಾಗ್ರೇಂಜ್ ಪಾಯಿಂಟ್‌ನ (L1)ಸುತ್ತಲಿನ ಗಮ್ಯಸ್ಥಾನಕ್ಕೆ ನೌಕೆ ತಲುಪಲು 110 ದಿನಗಳ ಪಯಣದ ಆರಂಭವನ್ನು ಇದು ಸೂಚಿಸುತ್ತದೆ.
ನೌಕೆಯ ಕಾರ್ಯ ಆರಂಭ:ಸೆ.2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹಾರಿ ಬಿಡಲಾಗಿದ್ದ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ವೈಜ್ಞಾನಿಕ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (STEPS) ಉಪಕರಣದ ಸಂವೇದಕಗಳು ಭೂಮಿಯಿಂದ 50 ಸಾವಿರ ಕಿ.ಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿವೆ ಎಂದು ಈ ಹಿಂದೆ ಇಸ್ರೋ ಹೇಳಿತ್ತು.
ಈ ಮಾಹಿತಿಯು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ನೆರವು ನೀಡಲಿದೆ. ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನು ತೋರಿಸುತ್ತದೆ ಎಂದು ಇಸ್ರೋ ತಿಳಿಸಿತ್ತು. ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (STEPS) ಉಪಕರಣ, ಆದಿತ್ಯ ಸೌರ ಮಾರುತದ ಕಣದ ಪ್ರಯೋಗದ (ASPEX) ಪೇಲೋಡ್‌ನ ಒಂದು ಭಾಗವಾಗಿದೆ.
ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು 7 ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ-ಎಲ್ 1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುತ್ತದೆ. 125 ದಿನಗಳಲ್ಲಿ ಎಲ್-1 ಬಿಂದುವಿಗೆ ನೌಕೆಯನ್ನು ಸೇರಿಸಲಾಗುತ್ತದೆ. ಭಾರತದ ಚೊಚ್ಚಲ ಸೌರ ಮಿಷನ್‌ನ ಪ್ರಾಥಮಿಕ ಉದ್ದೇಶಗಳು ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸುವುದು ಮತ್ತು ಭಾರತದ ಸೌರ ಪರಿಶೋಧನಾ ಪ್ರಯತ್ನಗಳಲ್ಲಿ ಮತ್ತೊಂದು ಮೈಲಿಗಲಿಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ಸೂರ್ಯಯಾನದ ಬಹುದೂರದ ಯಾತ್ರೆ ಆರಂಭ: 5ನೇ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ