ಭೂಮಂಡಲದ ಸಕಲ ಜೀವರಾಶಿಗಳ ಶಕ್ತಿಯ ಮೂಲವಾಗಿರುವ 'ಸೂರ್ಯ' ತನ್ನ ಚಲನೆಯ (ಸೋಲಾರ್ ಸೈಕಲ್/ಸೌರ ಚಕ್ರ) ದಿಕ್ಕನ್ನು ಪ್ರತಿ 11 ವರ್ಷಗಳಿಗೊಮ್ಮೆ ಬದಲಾಯಿಸುತ್ತಿರುತ್ತಾನೆ. ಈ ದಿಕ್ಕು ಬದಲಾವಣೆಯ ವಿದ್ಯಮಾನ ಸೌರ ಚಕ್ರದ ಗರಿಷ್ಠ ಹಂತದಲ್ಲಿ ನಡೆಯುತ್ತದೆ. ಆ ಸಮಯದಲ್ಲಿ ಸೂರ್ಯನ ಮೇಲ್ಮೈ ಅತ್ಯಂತ ಪ್ರಕ್ಷುಬ್ಧವಾಗಿರಲಿದ್ದು ಅಲ್ಲಿ ಬೃಹತ್ ಸೌರ ಸ್ಫೋಟಗಳು, ಸೌರ ಜ್ವಾಲೆಗಳು ಏಳುತ್ತಿರುತ್ತವೆ.
ಇದೀಗ ಈ ಸೋಲಾರ್ ಸೈಕಲ್ ಗರಿಷ್ಠ ಮಟ್ಟ ಸಮೀಪಿಸುತ್ತಿದ್ದು 2025ರಲ್ಲಿ ಪೂರ್ಣಗೊಳ್ಳುತ್ತದಂತೆ. ಇದರ ಪರಿಣಾಮವೆಂಬಂತೆ ಸೂರ್ಯನ ಮೈಮೇಲೆ ಕೇವಲ ಕಳೆದ ಎರಡು ವಾರಗಳಲ್ಲಿ 35 ಕರೋನಲ್ ಮಾಸ್ ಇಜೆಕ್ಷನ್‌ಗಳು, 14 ಸೌರಕಲೆಗಳು ಮತ್ತು ಆರು ಸೌರ ಜ್ವಾಲೆಗಳು ಕಂಡುಬಂದಿವೆ. ಅವುಗಳಲ್ಲಿ ಕೆಲವು ನೇರವಾಗಿ ಭುವಿಗೆ ಅಪ್ಪಳಿಸಿವೆ. ಅದು ಹೇಗೆ ಸಾಧ್ಯವೆಂದು ನಿಮ್ಮನ್ನು ಕಾಡಬಹುದು.
ಸೌರ ವೃತ್ತವು ಗರಿಷ್ಠ ಮಟ್ಟಕ್ಕೆ ಸಮೀಪದಲ್ಲಿ ಇರುವುದರಿಂದ ಈ ರೀತಿಯ ಘಟನೆಗಳು ಇನ್ನೂ ಹೆಚ್ಚಾಗುತ್ತವೆ. ಆದರೆ ಇದು ಕಳೆದ ಕೆಲವು ವಾರಗಳಿಂದ ನಿರೀಕ್ಷೆಗಿಂತಲೂ ವೇಗವಾಗಿ ನಡೆಯುತ್ತಿದೆ. ಇವುಗಳು ಭೂಮಿ ಮೇಲಿನ ಜೀವಿಗಳ ಮೇಲಷ್ಟೇ ಅಲ್ಲ, ಕೃತಕ ಉಪಗ್ರಹಗಳು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನಯಾತ್ರಿಗಳ ಮೇಲೂ ತೀವ್ರ ಪರಿಣಾಮ ಬೀರಬಲ್ಲದು ಎಂದು ನಾಸಾ ಎಚ್ಚರಿಸಿದೆ.
ಹಾಗಾದರೆ, ಸೌರ ಚಕ್ರ ಎಂದರೇನು?: ನಾಸಾದ ಹೇಳುವಂತೆ, ಸೂರ್ಯನ ಕಾಂತಕ್ಷೇತ್ರ ಒಂದು ತಿರುಗುವಿಕೆಯನ್ನು ಪೂರ್ಣಗೊಳಿಸಿದರೆ ಅದನ್ನು ಸೌರ ಚಕ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿ 11 ವರ್ಷಗಳಿಗೊಮ್ಮೆ ಸೂರ್ಯನ ಕಾಂತಕ್ಷೇತ್ರ ಸಂಪೂರ್ಣವಾಗಿ ಹಿಮ್ಮುಖ ಚಲನೆಯಲ್ಲಿರುತ್ತದೆ. ಆಗ ಸೂರ್ಯನ ಉತ್ತರ ಮತ್ತು ದಕ್ಷಿಣ ಧ್ರುವಗಳ ಸ್ಥಾನಗಳು ಪರಸ್ಪರ ಬದಲಾವಣೆ ಆಗುತ್ತವೆ. ಈ ಪ್ರಕ್ರಿಯೆ ಸೌರ ಚಕ್ರದ ಗರಿಷ್ಠ ಹಂತದಲ್ಲಿ ನಡೆಯುತ್ತದೆ.
ಆ ಸಮಯದಲ್ಲಿ ಸೂರ್ಯನ ಮೇಲ್ಮೈ ಪ್ರಕ್ಷುಬ್ಧವಾಗುತ್ತದೆ. ಬೃಹತ್ ಸೌರ ಸ್ಫೋಟಗಳು ಮತ್ತು ಸೌರ ಜ್ವಾಲೆಗಳು ಏಳುತ್ತವೆ. ಇದಾದ ನಂತರ ಮತ್ತೆ ಸೂರ್ಯನ ಮೈ ಶಾಂತವಾಗುತ್ತದೆ. ಸೌರ ಚಕ್ರದ ಈ ಗರಿಷ್ಠ ಹಂತದಲ್ಲಿ ಸೌರ ಬಿರುಗಾಳಿಗಳು ಮತ್ತು ಅದರಿಂದ ಉಂಟಾಗುವ ಸ್ಫೋಟಗಳು ಸೌರವ್ಯೂಹದ ಮೇಲೂ, ಕೃತಕ ಉಪಗ್ರಹಗಳು ಮತ್ತು ಸಂವಹನ ಸಂಕೇತಗಳನ್ನೂ ತೊಂದರೆಗೆ ಸಿಲುಕಿಸುತ್ತವೆ ಎನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು.
ಸೂರ್ಯನ ಮೇಲ್ಮೈಯಲ್ಲಿ ಸಂಭವಿಸುವ ಇಂಥ ಬೃಹತ್ ಸ್ಫೋಟಗಳನ್ನು 'ಕರೋನಲ್ ಮಾಸ್ ಎಜೆಕ್ಷನ್ಸ್' ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ, ಶತಕೋಟಿ ಟನ್ಗಳಷ್ಟು ವಸ್ತುಗಳು ಬಾಹ್ಯಾಕಾಶಕ್ಕೆ ಬಿಡುಗಡೆಯಾಗುತ್ತವೆ. ಮತ್ತು ಗಂಟೆಗೆ ಲಕ್ಷ ಕಿಲೋಮೀಟರ್ ವೇಗದಲ್ಲಿ ಈ ವಸ್ತುಗಳ ಚಲನೆ ಇರುತ್ತವೆ. ಸೂರ್ಯನ ಮೇಲ್ಮೈಯಲ್ಲಿರುವ ಕಪ್ಪು ಪ್ರದೇಶಗಳನ್ನು ಸನ್ ಸ್ಪಾಟ್ ಎನ್ನುವರು. ಈ ಸನ್ ಸ್ಪಾಟ್ಗಳು ಸೂರ್ಯನ ಮೇಲ್ಮೈಯ ಇತರ ಭಾಗಗಳಿಗಿಂತ ತಂಪಾಗಿರುವ ಕಾರಣ ಆ ರೀತಿ ನಮ್ಮ ಕಣ್ಣಿಗೆ ಗೋಚರಿಸುತ್ತವೆ. ಸನ್ ಸ್ಪಾಟ್ಗಳ ಬಳಿ ಕಾಂತಕ್ಷೇತ್ರಗಳ ಮರುಜೋಡಣೆಯಿಂದಾಗಿ ಸ್ವಯಂಪ್ರೇರಿತವಾಗಿ ಶಕ್ತಿ ಬಿಡುಗಡೆಯಾಗುವುದನ್ನು ಸೌರ ಜ್ವಾಲೆಗಳೆಂದು ಹೆಸರಿಸಲಾಗಿದೆ.
ಇದನ್ನೂ ಓದಿ :ಸೂರ್ಯನ ಸುತ್ತ ಕಾಮನಬಿಲ್ಲಿನ ವೃತ್ತ; ಅಪರೂಪದ ವಿದ್ಯಮಾನದ ಫೋಟೋಗಳು