ನವದೆಹಲಿ: ಅಂದಾಜು 4 ಮಿಲಿಯನ್ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ಗಳನ್ನು ಹೊಂದುವ ಮೂಲಕ ಭಾರತದ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಮಾರುಕಟ್ಟೆ ವಿಶಾಲವಾಗಿ ಬೆಳವಣಿಗೆಯಾಗುತ್ತಿದೆ. ತಮ್ಮ ಬ್ರಾಂಡ್ಗಳ ಉತ್ಪನ್ನಗಳನ್ನು ಮಾರಾಟ ಮಾಡಲು ಅತ್ಯಧಿಕ ಕಂಪನಿಗಳು ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಗಳ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಮಾರುಕಟ್ಟೆ 2028ರ ವೇಳೆಗೆ 2.8 ರಿಂದ 3.5 ಶತಕೋಟಿ ಡಾಲರ್ಗೆ ವೃದ್ಧಿಯಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ಬ್ರಾಂಡ್ಗಳು ತಮ್ಮ ಉತ್ಪನ್ನಗಳನ್ನು ನಿರ್ದಿಷ್ಟ ಗ್ರಾಹಕರಿಗೆ ತಲುಪಿಸುವಲ್ಲಿ ಇನ್ಫ್ಲುಯೆನ್ಸರ್ಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದ ಕಾರಣದಿಂದ ಕಳೆದ 12 ತಿಂಗಳುಗಳಲ್ಲಿ ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್ ಹೆಚ್ಚಿನ ವೇಗ ಪಡೆದುಕೊಂಡಿದೆ. ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್‌ಗಳ ಪ್ರಕಾರ, ಭಾರತದ ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್ ಇಕೊಸಿಸ್ಟಮ್ನಲ್ಲಿ ಸುಮಾರು 3.5 ರಿಂದ 4 ಮಿಲಿಯನ್ ಇನ್ಫ್ಲುಯೆನ್ಸರ್ಗಳು (10,000 ಕ್ಕಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಖಾತೆಗಳು) ಇದ್ದಾರೆ.
ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್‌ನಲ್ಲಿನ ಪ್ರಾಥಮಿಕ ಸವಾಲುಗಳು ಎಂದರೆ- ಬ್ರ್ಯಾಂಡ್‌ಗಳ ನಿರ್ದಿಷ್ಟ ಪ್ರಚಾರ ಅಗತ್ಯತೆಗಳಿಗೆ ತಕ್ಕಂತೆ ಇನ್ಫ್ಲುಯೆನ್ಸರ್ಗಳ ಆಯ್ಕೆ ಮತ್ತು ಇನ್ಫ್ಲುಯೆನ್ಸರ್ಗಳ ಪರಿಣಾಮವನ್ನು ನಿಖರವಾಗಿ ನಿರ್ಣಯಿಸುವ ಸಾಮರ್ಥ್ಯ ಎಂದು ರೆಡ್‌ಸೀರ್‌ನ ಸಹಾಯಕ ಪಾಲುದಾರ ಮುಖೇಶ್ ಕುಮಾರ್ ಹೇಳಿದರು.
ಇನ್ಫ್ಲುಯೆನ್ಸರ್ಗಳು ಬೆಲೆ ಪಾರದರ್ಶಕತೆಯನ್ನು ಸಾಧಿಸುವಲ್ಲಿ ಮತ್ತು ಅನುಕೂಲಕರ ವ್ಯವಹಾರಗಳನ್ನು ಪಡೆದುಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ. ಕ್ರಿಯೇಟರ್ ಮಾರ್ಕೆಟ್ ಪ್ಲೇಸ್ ಸ್ಥಳಗಳಂತಹ ಉದಯೋನ್ಮುಖ ಮಾದರಿಗಳ ಆಗಮನವು ಈ ಸವಾಲುಗಳನ್ನು ಪರಿಹರಿಸುವಲ್ಲಿ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 1 ಬಿಲಿಯನ್ ಮೈಲಿಗಲ್ಲು ದಾಟಲಿದೆ ಎಂದು ರೆಡ್‌ಸೀರ್ ಅಂದಾಜಿಸಿದೆ.