ಬೆಂಗಳೂರು:ಸಾಮಾಜಿಕ ಮಾಧ್ಯಮಗಳು ಜಾಗತಿಕವಾಗಿ ಸಂಪರ್ಕ ಸಾಧಿಸಲು ನಮಗೆ ಸಿಕ್ಕ ಹೊಸ ಸಾಧನ. ಜಗತ್ತಿನ ಮೂಲೆಮೂಲೆಯ ಜನರನ್ನು ಸಂಪರ್ಕಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ. ಸಾಮಾಜಿಕ ಮಾಧ್ಯಮಗಳು ವಿವಿಧ ಸಮುದಾಯಗಳ ಧ್ವನಿಯೂ ಹೌದು. ಇವು ನಮ್ಮ ಜೀವನದಲ್ಲಿ ಅಗಾಧ ಬದಲಾವಣೆಗೂ ಕಾರಣವಾಗಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳಿಗೂ ಒಂದು ದಿನ ನಿಗದಿ ಮಾಡಲಾಗಿದೆ. ಜಾಗತಿಕವಾಗಿ ಜೂನ್ 30ರಂದು ಸಾಮಾಜಿಕ ಮಾಧ್ಯಮ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಸಾಮಾಜಿಕ ಮಾಧ್ಯಮ ಕಂಪನಿ ಮಶಬೆಲ್ 2010 ಜೂನ್ 30ರಂದು ಸಾಮಾಜಿಕ ಮಾಧ್ಯಮದ ದಿನದ ಆಚರಣೆಗೆ ಮುಂದಾಯಿತು. ಅಂದಿನಿಂದ ಈ ದಿನಾಚರಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಸೇರಿದಂತೆ ಅಪರಿಚಿತರ ನಡುವೆ ಸಂಪರ್ಕ ಸಾಧಿಸಲು ಪ್ರಮುಖ ಸಂವಹನ ಮಾಧ್ಯಮ. ವಾಟ್ಸಾಪ್, ಫೇಸ್ಬುಕ್, ಟ್ವಿಟರ್, ಲಿಂಕ್ಡಿನ್ ಮತ್ತು ಇನ್ಸ್ಟಾಗ್ರಾಂ ಜಾಗತಿಕವಾಗಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಸಾಮಾಜಿಕ ಮಾಧ್ಯಮಗಳು.
2023ರಲ್ಲಿ ಸಾಮಾಜಿಕ ಮಾಧ್ಯಮದ ದಿನವನ್ನು 'ಡಿಜಿಟಲ್ ಪ್ರಪಂಚವನ್ನು ಒಂದುಗೂಡಿಸುವುದು' ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಜನರನ್ನು ಒಟ್ಟಿಗೆ ತರುತ್ತಿರುವುದರ ಸಕಾರಾತ್ಮಕ ಪರಿಣಾಮ, ಜಾಗತಿಕ ಸಮುದಾಯದ ಕಲ್ಪನೆಯನ್ನು ಹುಟ್ಟುವಿಕೆಯನ್ನು ಇದು ಪ್ರಮುಖವಾಗಿ ಹೊಂದಿದೆ. ಸಾಮಾಜಿಕ ಮಾಧ್ಯಮಗಳು ಇಂದು ದೂರ ದೂರದಲ್ಲಿರುವ ಕುಟುಂಬ ಮತ್ತು ಸ್ನೇಹಿತರನ್ನು ಸಂಪರ್ಕ ಸಾಧಿಸುವಂತೆ ಮಾಡಿದೆ. ಅನೇಕ ಜನರು ಇದರಿಂದಲೇ ಜೀವನ ನಡೆಸುತ್ತಿದ್ದಾರೆ. ದೇಶದಲ್ಲಿ ಆಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳು ಕ್ರಾಂತಿಕಾರಿಯಾಗಿದ್ದು, ಸಾಮಾಜಿಕ ಮಾಧ್ಯಮಗಳು ಈ ಶಕ್ತಿಯನ್ನು ಅಂಗೀಕರಿಸುತ್ತದೆ. ಮಶಬೆಲ್ ವಾರ್ಷಿಕ ಸಾಮಾಜಿಕ ಮಾಧ್ಯಮ ದಿನವನ್ನು ಯಾಕೆ ಆಚರಣೆಗೆ ತಂದಿತು ಎಂಬುದಕ್ಕೆ ಮತ್ತೊಂದು ಕಾರಣ ಎಂದರೆ, ಜಾಗತಿಕವಾಗಿ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮಗಳ ಪರಿಣಾಮವನ್ನು ಪುರಸ್ಕರಿಸುವುದು ಪ್ರಮುಖವಾಗಿದೆ. ಸಾಮಾಜಿಕ ಮಾಧ್ಯಮಗಳ ಕೆಲವು ಲೋಪಗಳ ನಡುವೆಯೂ ಇದು ಪ್ರಮುಖವಾಗಿ ಸಾಮಾನ್ಯ ಜನರಿಗೆ ಧ್ವನಿಯಾಗಿದ್ದು, ಅವರಿಗೆ ಅನೇಕ ಅವಕಾಶಗಳನ್ನೂ ನೀಡಿದೆ ಎಂಬುದನ್ನು ಒಪ್ಪಲೇಬೇಕಿದೆ.