ವಾಟರ್ಲೂ(ಕೆನಡಾ):ಸೂರ್ಯನ ಅತಿನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಓಝೋನ್ ಪದರವನ್ನು ಕ್ಲೋರೋಫ್ಲೋರೋ ಕಾರ್ಬನ್ ಅನಿಲ ನಾಶಗೊಳಿಸುತ್ತದೆ ಎಂದು ಇತ್ತೀಚಿನವರೆಗೆ ನಂಬಲಾಗಿದ್ದು, ಈಗ ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೊಸ ವಿಚಾರವನ್ನು ಬಹಿರಂಗಪಡಿಸಿದೆ. ಕಾಳ್ಗಿಚ್ಚು ಕೂಡಾ ಓಝೋನ್ ಪದರದ ನಾಶಕ್ಕೆ ಕಾರಣವಾಗುತ್ತದೆ ಎಂದು ಈ ಅಧ್ಯಯ ವರದಿ ಬಹಿರಂಗಪಡಿಸಿದೆ.
ವಿಶ್ವವಿದ್ಯಾಲಯದ ಸಂಶೋಧನಾ ವರದಿ 'ಸೈನ್ಸ್' ಎಂಬ ಜರ್ನಲ್ನಲ್ಲಿ ಪ್ರಕಟವಾಗಿದ್ದು, ಬೃಹತ್ ಪ್ರಮಾಣದಲ್ಲಿ ಆಗಾಗ ಸಂಭವಿಸುವ ಕಾಳ್ಗಿಚ್ಚು ಹವಾಮಾನ ಬದಲಾವಣೆ ಮತ್ತು ಓಝೋನ್ ಪದರದ ನಾಶಕ್ಕೂ ಕಾರಣವಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅಧ್ಯಯನ ನಡೆಸಲು ಸಂಶೋಧಕರು ಕೆನಡಿಯನ್ ಸ್ಪೇಸ್ ಏಜೆನ್ಸಿಯ ಅಟ್ಮಾಸ್ಪರಿಕ್ ಕೆಮಿಸ್ಟ್ರಿ ಎಕ್ಸ್ಪೆರಿಮೆಂಟ್(ಎಸಿಇ) ಉಪಗ್ರಹವನ್ನು ಉಪಯೋಗಿಸಿದ್ದಾರೆ. ಈ ಉಪಗ್ರಹದ ಮೂಲಕ ಕಾಳ್ಗಿಚ್ಚಿನ ಹೊಗೆಯ ಕಣಗಳು ಓಝೋನ್ ಪದರವಿರುವ ಸ್ಟ್ರಾಟೋಸ್ಪಿಯರ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧನೆ ನಡೆಸಲಾಗಿದೆ.