ಬೀಜಿಂಗ್ :ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಭಾರಿ ಕುಸಿತವಾಗಿರುವ ಕಾರಣದಿಂದ ಸ್ಮಾರ್ಟ್‌ಫೋನ್ ತಯಾರಕ OPPO ತನ್ನ ಚಿಪ್ ವಿನ್ಯಾಸದ ಅಂಗಸಂಸ್ಥೆಯಾದ Zeku ಅನ್ನು ಮುಚ್ಚಿದೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಸೌತ್ ಚೀನಾ ಮಾಧ್ಯಮಗಳ ಪ್ರಕಾರ, ಈ ಬಗ್ಗೆ ಒಪ್ಪೊ ಪ್ರಕಟಣೆ ಹೊರಡಿಸಿದ್ದು, ಜಾಗತಿಕ ಆರ್ಥಿಕತೆ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಗಳ ಕಾರಣದಿಂದ ಇಂಥದೊಂದು ಕಷ್ಟಕರ ನಿರ್ಧಾರ ತಳೆಯಲಾಗಿದೆ ಎಂದು ಹೇಳಿದೆ. ಘಟಕವನ್ನು ಬಂದ್ ಮಾಡುತ್ತಿರುವ ಬಗ್ಗೆ ನೌಕರರಿಗೆ ಒಂದು ದಿನಕ್ಕಿಂತ ಕಡಿಮೆ ಅವಧಿಯ ನೋಟಿಸ್ ನೀಡಲಾಗಿದೆ ಎಂದು ವರದಿ ಹೇಳಿದೆ.
ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಒಪ್ಪೊ ತನ್ನ ಸಾಧನಗಳಲ್ಲಿ ಬಳಸಬಹುದಾದ ಚಿಪ್‌ಗಳನ್ನು ವಿನ್ಯಾಸಗೊಳಿಸಲು 2019 ರಲ್ಲಿ Zeku ಅನ್ನು ಸ್ಥಾಪಿಸಿತ್ತು. ಶಿಯೋಮಿ ಸೇರಿದಂತೆ ಇತರ ಸ್ಮಾರ್ಟ್‌ಫೋನ್ ತಯಾರಕರು ತಮ್ಮದೇ ಆದ ಚಿಪ್ ವಿನ್ಯಾಸ ಕಂಪನಿಗಳನ್ನು ಹೊಂದಿವೆ. ಸುಧಾರಿತ ಸೆಮಿಕಂಡಕ್ಟರ್ಗಳ ವಿಷಯದಲ್ಲಿ ಅಮೆರಿಕವು ರಫ್ತು ನಿರ್ಬಂಧಗಳನ್ನು ಹೆಚ್ಚಿಸಿದ ಕಾರಣದಿಂದ ಚೀನಾದಲ್ಲಿ ಚಿಪ್ ತಯಾರಿಕೆಯ ಮೇಲೆ ಪ್ರತಿಕೂಲ ಪರಿಣಾಮವಾಗಿರುವುದರಿಂದ ಕಂಪನಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಚೀನಾ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ (CSIA) ಇಂಟಿಗ್ರೇಟೆಡ್ ಸರ್ಕ್ಯೂಟ್ ವಿನ್ಯಾಸದ ಅಧ್ಯಕ್ಷ ವೀ ಶಾಜುನ್ ಪ್ರಕಾರ, ಕಳೆದ ವರ್ಷ ಚೀನಾದಲ್ಲಿ 3,243 ಫ್ಯಾಬ್ಲೆಸ್ ಚಿಪ್ ತಯಾರಿಕಾ ಕಂಪನಿಗಳಿದ್ದವು. ಆದರೆ, ಇವುಗಳ ಪೈಕಿ 566 ಮಾತ್ರ 100 ಮಿಲಿಯನ್ ಯುವಾನ್ ($ 14.4 ಮಿಲಿಯನ್) ಗಿಂತ ಹೆಚ್ಚಿನ ಮಾರಾಟವನ್ನು ಹೊಂದಿವೆ ಎಂದು ವರದಿ ಉಲ್ಲೇಖಿಸಿದೆ. ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಆದಾಯವು 2023 ರಲ್ಲಿ ಶೇಕಡಾ 11.2 ರಷ್ಟು ಕಡಿಮೆಯಾಗಿ 532 ಶತಕೋಟಿ ಡಾಲರ್ಗೆ ತಲುಪಲಿದೆ ಎಮದು ನಿರೀಕ್ಷಿಸಲಾಗಿದೆ. 2022 ರಲ್ಲಿ ಸೆಮಿಕಂಡಕ್ಟರ್ ಮಾರುಕಟ್ಟೆ ಒಟ್ಟು 599.6 ಬಿಲಿಯನ್ ಡಾಲರ್ ಆಗಿತ್ತು. ಇದು 2021 ರಿಂದ ಶೇಕಡಾ 0.2 ರ ಕನಿಷ್ಠ ಬೆಳವಣಿಗೆಯಾಗಿದೆ. ಪಿಸಿ, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಸೆಮಿಕಂಡಕ್ಟರ್ ಮಾರುಕಟ್ಟೆಗಳು ಸ್ಥಗಿತಗೊಳ್ಳುತ್ತಿವೆ.