ಕರ್ನಾಟಕ

karnataka

ETV Bharat / science-and-technology

ಚಂದ್ರನ ದಕ್ಷಿಣ ಧ್ರುವದ ಅಧ್ಯಯನದ ಮಹತ್ವವೇನು? ಇಲ್ಲಿದೆ ಉಪಯುಕ್ತ ಮಾಹಿತಿ - ಚಂದ್ರ ಮತ್ತು ಸೌರವ್ಯೂಹದ ಉಗಮ

ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದಲ್ಲಿ ಅನ್ವೇಷಣೆ ನಡೆಸಲು ಇಸ್ರೊ ಏಕೆ ಮುಂದಾಗಿದೆ ಎಂಬ ಬಗ್ಗೆ ಇಸ್ರೋ ಅಗತ್ಯ ವ್ಯವಸ್ಥೆ ಘಟಕದ ನಿರ್ದೇಶಕ ಇ.ಎಸ್.ಪದ್ಮಕುಮಾರ್ ಮಾಹಿತಿ ನೀಡಿದ್ದಾರೆ.

significance of studying the South Pole of the Moon
significance of studying the South Pole of the Moon

By ETV Bharat Karnataka Team

Published : Aug 21, 2023, 7:49 PM IST

Updated : Aug 21, 2023, 9:01 PM IST

ಇಸ್ರೋ ಅಗತ್ಯ ವ್ಯವಸ್ಥೆ ಘಟಕದ ನಿರ್ದೇಶಕ ಪದ್ಮಕುಮಾರ್

ತಿರುವನಂತಪುರಂ: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಲ್ಯಾಂಡರ್​ ಅನ್ನು ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದಲ್ಲಿಯೇ ಇಳಿಸಲು ಇಸ್ರೋ ಏಕೆ ಯೋಜಿಸಿದೆ ಎಂಬುದನ್ನು ಇಸ್ರೋ ಅಗತ್ಯ ವ್ಯವಸ್ಥೆ ಘಟಕದ ನಿರ್ದೇಶಕ (Essential System Unit Director) ಇ.ಎಸ್. ಪದ್ಮಕುಮಾರ್ ವಿವರಿಸಿದ್ದಾರೆ. ಚಂದ್ರಯಾನ-3 ಬಗ್ಗೆ ಅವರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ.

ದಕ್ಷಿಣ ಧ್ರುವ ಪ್ರದೇಶಗಳು ಹೆಪ್ಪುಗಟ್ಟಿವೆ: "ಬಹುತೇಕ ಚಂದ್ರಯಾನ ಯೋಜನೆಗಳು ಸಮಭಾಜಕ ವೃತ್ತದ ಸುತ್ತಲೂ ತಮ್ಮ ಗಮನ ಕೇಂದ್ರೀಕರಿಸಿದ್ದವು. ದಕ್ಷಿಣ ಧ್ರುವಕ್ಕೆ ಹೋಲಿಸಿದರೆ ಸಮಭಾಜಕ ವೃತ್ತದಲ್ಲಿ ಹೆಚ್ಚು ಬೆಳಕಿರುತ್ತದೆ. ದಕ್ಷಿಣ ಧ್ರುವ ಪ್ರದೇಶಗಳು ಹೆಪ್ಪುಗಟ್ಟಿವೆ ಮತ್ತು ಅಲ್ಲಿ ನಮಗೆ ಅತ್ಯಂತ ಪ್ರತಿಕೂಲ ವಾತಾವರಣವಿದೆ. ಹೀಗಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸಲು ಸಾಕಷ್ಟು ಅವಕಾಶವಿದೆ ಎಂದು ನಾವು ಭಾವಿಸುತ್ತೇವೆ. ವಿಶೇಷವಾಗಿ ಮೇಲ್ಪದರದ ಕವಚದ ಬಗ್ಗೆ ಅನ್ವೇಷಣೆ ನಡೆಸುವುದು ನಮ್ಮ ಗುರಿ. ಅಧ್ಯಯನ ಮಾಡಲು ಅಲ್ಲಿ ಹೆಚ್ಚಿನ ಅಂಶಗಳು ಇರುವುದರಿಂದ ನಾವು ಅಲ್ಲಿಯೇ ಅನ್ವೇಷಿಸಬೇಕು. ಅದರಿಂದ ಚಂದ್ರ ಮತ್ತು ಸೌರವ್ಯೂಹದ ಉಗಮದ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲು ಮತ್ತು ಅಲ್ಲಿ ಅನ್ವೇಷಿಸಲು ನಾವು ಆಸಕ್ತಿ ಹೊಂದಿದ್ದೇವೆ" ಎಂದು ಪದ್ಮಕುಮಾರ್​ ತಿಳಿಸಿದರು.

ಚಂದ್ರನ ರಚನೆಯ ಸಂಶೋಧನೆ: "ಆದರೆ ದಕ್ಷಿಣ ಧ್ರುವ ಪ್ರದೇಶದಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಅಲ್ಲಿ ಇಳಿಯುವುದು ತುಂಬಾ ಕಷ್ಟ. ಇನ್ನು ಅಲ್ಲಿಗೆ ಹೋಗಿ ಅನ್ವೇಷಿಸುವುದು ಇನ್ನೂ ಕಷ್ಟ. ಆದರೆ ನಾವು ದಕ್ಷಿಣ ಧ್ರುವದಲ್ಲಿ ನಿಖರವಾಗಿ 69.2 ಡಿಗ್ರಿ ದಕ್ಷಿಣದಲ್ಲಿ ಇಳಿಯಲು ನಿರ್ಧರಿಸಿದ್ದೇವೆ. 14 ದಿನಗಳವರೆಗೆ ನಾವು ಅಲ್ಲಿ ಅನ್ವೇಷಣೆ ನಡೆಸಲಿದ್ದೇವೆ. ಪೇಲೋಡ್‌ಗಳು ವಿವಿಧ ಅಂಶಗಳನ್ನು ಅಧ್ಯಯನ ಮಾಡಲಿವೆ. ಚಂದ್ರನ ಮೇಲ್ಮೈಯ ರಚನೆ, ಅಲ್ಲಿನ ಅಂಶಗಳು, ಮೇಲ್ಮೈ ರಾಸಾಯನಿಕ ಸಂಯೋಜನೆ ಮತ್ತು ಇನ್ನೂ ಅನೇಕ ವಿಷಯಗಳನ್ನು ಅಧ್ಯಯನ ಮಾಡಬೇಕಿದೆ. ಈ ಅಧ್ಯಯನವು ಚಂದ್ರನ ರಚನೆಯ ಮಾಹಿತಿಯ ಮೇಲೆ ಹೊಸ ಬೆಳಕು ಚೆಲ್ಲಲಿದೆ. ಹೀಗಾಗಿ ನಾವು ನೀಡಲಿರುವ ಮಾಹಿತಿಯ ಬಗ್ಗೆ ವೈಜ್ಞಾನಿಕ ಸಮುದಾಯವು ಕಾತರದಿಂದ ಕಾಯುತ್ತಿದೆ." ಎಂದು ಅವರು ಹೇಳಿದರು.

ಲೂನಾ-25ಕ್ಕೆ ಹೋಲಿಸಿದರೆ ಚಂದ್ರಯಾನ-3 ಇಷ್ಟೊಂದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದೇಕೆ ಎಂಬ ಬಗ್ಗೆಯೂ ಪದ್ಮಕುಮಾರ್​ ಮಾಹಿತಿ ನೀಡಿದರು.

ಅತ್ಯಧಿಕ ಭಾರ ಸಾಗಿಸಬಲ್ಲ LVM: "ನಮ್ಮ ಬಳಿ ವಿಶ್ವಾಸಾರ್ಹವಾದ ಉಡಾವಣಾ ವಾಹನವಿದೆ. ನಮ್ಮ ಉಡಾವಣಾ ವಾಹನವಾದ LVM 3 ರಾಕೆಟ್ ಇದು ನಾವು ಚಂದ್ರನಲ್ಲಿಗೆ ಅತ್ಯಧಿಕ ಭಾರವನ್ನು ಸಾಗಿಸಲು ಮತ್ತು ಅಲ್ಲಿ ಸಂಶೋಧನೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ಪರಿಶೋಧನೆಗಾಗಿ ನಾವು ಹಲವಾರು ಪೇಲೋಡ್‌ಗಳು ಮತ್ತು ರೋವರ್‌ಗಳನ್ನು ಸಾಗಿಸುತ್ತಿದ್ದೇವೆ ಮತ್ತು ನೀಡಲಾದ ಸಂಪನ್ಮೂಲವನ್ನು ಬಳಸಿಕೊಂಡು ಪ್ರಯೋಗಗಳನ್ನು ನಡೆಸಲು ಇದು ಏಕೈಕ ಮಾರ್ಗವಾಗಿದೆ. ಇದು ಚೆನ್ನಾಗಿ ಯೋಚಿಸಿದ ನಂತರವೇ ಕೈಗೊಂಡ ನಿರ್ಧಾರವಾಗಿದೆ. ನಮ್ಮ ವಿಶ್ವಾಸಾರ್ಹ ಲಾಂಚರ್ LVM 3 ನಲ್ಲಿ ನಾವು ಯಾವುದೇ ಬದಲಾವಣೆ ಮಾಡಿಲ್ಲ" ಎಂದು ಅವರು ಮಾಹಿತಿ ನೀಡಿದರು.

"ಯೋಜನೆಯು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಅದರ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಪ್ರತಿ ಹಂತವನ್ನು ಪರಿಶೀಲಿಸಲು, ಮೌಲ್ಯೀಕರಿಸಲು, ಪರಿಶೀಲಿಸಲು ಮತ್ತು ಪ್ರತಿ ಹಂತವನ್ನು ಪರಿಪೂರ್ಣವಾಗಿ ನಿರ್ವಹಿಸಲು ಇದು ನಮಗೆ ಸಮಯ ನೀಡುತ್ತದೆ. ನಾವು ಪ್ರತಿ ಹಂತದಲ್ಲೂ ಸ್ಥಿರವಾಗಿ ಚಲಿಸುತ್ತಿದ್ದೇವೆ. ಪ್ರತಿಯೊಂದು ಹಂತವನ್ನು ಪರಿಪೂರ್ಣವಾಗಿ ನಡೆಸಲಾಗುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಚಂದ್ರನಲ್ಲಿಗೆ ಸಾಗಿಸುವ ತೂಕ ನಮ್ಮ ಮುಂದಿನ ದೊಡ್ಡ ಸವಾಲಾಗಿದೆ. ನಮ್ಮ ಸಾಮರ್ಥ್ಯಗಳನ್ನು ಪರೀಕ್ಷಿಸಲು ಇದು ನಮಗೆ ಉತ್ತಮ ಅವಕಾಶ ನೀಡಿದೆ. ಲೂನಾ 25 ನಂತಹ ನೇರ ಆರೋಹಣ ಮತ್ತು ಸಾಗಣೆ ಕಾರ್ಯಾಚರಣೆಗೆ ದೊಡ್ಡ ರಾಕೆಟ್ ಅಗತ್ಯವಿದೆ. ಆದರೆ ಇಂಥ ವ್ಯವಸ್ಥೆಯಿಂದ ಯಾವುದೇ ರೀತಿಯ ಪರಿಶೀಲನೆ ಮಾಡಲು ತೀರಾ ಕಡಿಮೆ ಸಮಯ ಸಿಗುತ್ತದೆ. ಏನಾದರೂ ತಪ್ಪುಗಳಾದರೆ ಅದನ್ನು ಸರಿಪಡಿಸುವ ಕ್ರಮಗಳಿಗೆ ಹೆಚ್ಚು ಸಮಯವಿರುವುದಿಲ್ಲ" ಎಂದು ಅವರು ತಿಳಿಸಿದರು.

ಮುಂದಿನ ಯೋಜನೆಗಳು: ನಮ್ಮ ಮುಂದಿನ ಕಾರ್ಯಾಚರಣೆಗಳು ಉತ್ತಮವಾಗಿ ಸಾಗುತ್ತಿವೆ. ಚಂದ್ರನ ನಂತರ ನಾವು ಸೂರ್ಯನ ಅಧ್ಯಯನಕ್ಕೆ ಮುಂದಾಗಲಿದ್ದೇವೆ ಮತ್ತು ನೇರವಾಗಿ ಅಲ್ಲಿಗೆ ಹೋಗುತ್ತೇವೆ. ಚಂದ್ರ ಭೂಮಿಯಿಂದ 3 ಲಕ್ಷ ಕಿ.ಮೀ ದೂರದಲ್ಲಿದೆ. ಆದಿತ್ಯ ಎಲ್1 ಇದು ಎಲ್1 ರ ಸುತ್ತ ಕಕ್ಷೆಯನ್ನು ಹೊಂದಿರುತ್ತದೆ. ಎಲ್ 1 ಕಕ್ಷೆಯು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿದೆ. ಎಲ್ 1 ಸಹ ಒಂದು ಆಸಕ್ತಿದಾಯಕ ಪ್ರದೇಶವಾಗಿದ್ದು, ಅಲ್ಲಿ ಭೂಮಿಯ ಗುರುತ್ವಾಕರ್ಷಣೆ ಮತ್ತು ಸೂರ್ಯನ ಗುರುತ್ವಾಕರ್ಷಣೆ ಸಮಾನವಾಗಿರುತ್ತದೆ ಮತ್ತು ಕಡಿಮೆಯಾಗುತ್ತಿರುತ್ತದೆ. ಆದಿತ್ಯ ಎಲ್ 1 ಚಂದ್ರಯಾನ 3 ರ ಅನುಭವವನ್ನು ಬಳಸಲಿದೆ. ಆದಿತ್ಯ ಮಿಷನ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆಯಾಗಬಹುದಾಗಿದೆ ಎಂದು ಇ.ಎಸ್. ಪದ್ಮಕುಮಾರ್ ತಿಳಿಸಿದರು.

ಇದನ್ನೂ ಓದಿ : 10 ವರ್ಷಗಳಲ್ಲಿ ಸ್ಯಾಮ್​ಸಂಗ್​ 308 ಕೋಟಿ, ಆ್ಯಪಲ್​​ 210 ಕೋಟಿ ಮೊಬೈಲ್​ ಮಾರಾಟ

Last Updated : Aug 21, 2023, 9:01 PM IST

ABOUT THE AUTHOR

...view details