ರಾಮೇಶ್ವರಂ : ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಿದ ನಂತರ ಅಮೆರಿಕದಲ್ಲಿ ಸಂಕೀರ್ಣ ರಾಕೆಟ್ಗಳ ತಯಾರಿಕೆಯಲ್ಲಿ ತೊಡಗಿರುವ ವಿಜ್ಞಾನಿಗಳು ಭಾರತವು ಅವರೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳಬೇಕೆಂದು ಸಲಹೆ ನೀಡಿದ್ದರು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ರವಿವಾರ ಹೇಳಿದ್ದಾರೆ.
ಕಾಲ ಬದಲಾಗಿದೆ ಮತ್ತು ಭಾರತ ಅತ್ಯುತ್ತಮ ಸಾಧನಗಳು ಮತ್ತು ರಾಕೆಟ್ಗಳನ್ನು ನಿರ್ಮಿಸಲು ಸಮರ್ಥವಾಗಿದೆ ಮತ್ತು ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ್ದಾರೆ ಎಂದು ಅವರು ಹೇಳಿದರು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ 92ನೇ ಜನ್ಮ ದಿನಾಚರಣೆ ಅಂಗವಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶವು ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದೆ. ನಮ್ಮ ಜ್ಞಾನ ಮತ್ತು ತಿಳುವಳಿಕೆಗಳ ಮಟ್ಟವು ವಿಶ್ವದಲ್ಲಿಯೇ ಅತ್ಯುತ್ತಮವಾಗಿದೆ ಎಂದು ಹೇಳಿದ ಇಸ್ರೋ ಮುಖ್ಯಸ್ಥ ಸೋಮನಾಥ್, ಚಂದ್ರಯಾನ -3ರಲ್ಲಿ ನಾವು ಬಾಹ್ಯಾಕಾಶ ನೌಕೆಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವಾಗ ರಾಕೆಟ್ ಮತ್ತು ಅತ್ಯಂತ ಕಷ್ಟಕರ ಕಾರ್ಯಾಚರಣೆಗಳನ್ನು ನಿಭಾಯಿಸುವ ನಾಸಾ-ಜೆಪಿಎಲ್ನ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ತಜ್ಞರನ್ನು ಆಹ್ವಾನಿಸಿದ್ದೆವು ಎಂದು ವಿವರಿಸಿದರು.
ನಾಸಾ-ಜೆಪಿಎಲ್ನಿಂದ ಸುಮಾರು 5-6 ಜನ ಇಸ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು ಮತ್ತು ನಾವು ಅವರಿಗೆ ಚಂದ್ರಯಾನ -3ರ ಬಗ್ಗೆ ಮಾಹಿತಿ ನೀಡಿದ್ದೆವು. ನೌಕೆಯ ಸಾಫ್ಟ್ ಲ್ಯಾಂಡಿಂಗ್ ನಡೆಯುವ ಮೊದಲು ಆಗಸ್ಟ್ 23 ರಂದು ಈ ಬೆಳವಣಿಗೆ ನಡೆದಿತ್ತು. ನೌಕೆಯನ್ನು ನಾವು ಹೇಗೆ ವಿನ್ಯಾಸಗೊಳಿಸಿದ್ದೇವೆ ಮತ್ತು ನಮ್ಮ ಎಂಜಿನಿಯರ್ ಗಳು ಅದನ್ನು ಹೇಗೆ ತಯಾರಿಸಿದ್ದಾರೆ ಎಂಬುದನ್ನು ನಾವು ಅವರಿಗೆ ವಿವರಿಸಿದ್ದೆವು. ಚಂದ್ರನ ಮೇಲ್ಮೈಯಲ್ಲಿ ನಾವು ಇಳಿಯಲಿದ್ದೇವೆ ಎಂದು ಹೇಳಿದಾಗ ಅವರು- ಎಲ್ಲವೂ ಪರ್ಫೆಕ್ಟ್ ಆಗಿದೆ, ನೋ ಕಮೆಂಟ್ಸ್ ಎಂದಿದ್ದರು ಎಂದು ಸೋಮನಾಥ್ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.