ಹೈದರಾಬಾದ್:ಸೌರ ಅಧ್ಯಯನಕ್ಕಾಗಿ ಹಾರಿ ಬಿಡಲಾದ ಭಾರತದ ಆದಿತ್ಯ ಎಲ್ 1 ಮಿಷನ್ ಮೊದಲ ಬಾರಿಗೆ ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದು ಕಳುಹಿಸಿದೆ. ಅಲ್ಟ್ರಾವೈಲೆಟ್ ತರಂಗಾಂತರದ ಬಳಿಯ ಈ ಫೋಟೋಗಳಿಂದ ಸೂರ್ಯನ ಫೋಟೋಸ್ಪಿಯರ್ (ದ್ಯುತಿಗೋಳ) ಹಾಗೂ ಕ್ರೋಮೋಸ್ಪಿಯರ್ ಸಂಕೀರ್ಣವಾದ ಒಳನೋಟಗಳನ್ನು ಇದು ಒದಗಿಸುತ್ತದೆ ಎಂದು ಇಸ್ರೋ ತಿಳಿಸಿದೆ.
ಆದಿತ್ಯ ಎಲ್-2 ನೌಕೆ ಕಳುಹಿಸಿಕೊಟ್ಟಿರುವ ಸೂರ್ಯನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮವಾದ ಎಕ್ಸ್, ಇನ್ಸ್ಟ್ರಾಗ್ರಾಮ್ನಲ್ಲಿ ಇಸ್ರೋ ಹಂಚಿಕೊಂಡಿದೆ. ನೌಕೆಯಲ್ಲಿರುವ ಸೌರ ಅಲ್ಟ್ರಾವೈಲೆಟ್ ಟೆಲಿಸ್ಕೋಪ್ ಅಥವಾ ಸ್ಯೂಟ್( SUIT) ಉಪಕರಣವು 200-400 ಎನ್ಎಂ ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದೆ.
ನವೆಂಬರ್ 20 ರಂದು SUIT ಪೇಲೋಡ್ ಅನ್ನು ಕಾರ್ಯಾಚರಣೆ ನಡೆಸಲು ಸಕ್ರಿಯಗೊಳಿಸಲಾಗಿತ್ತು. ಅದು ಡಿಸೆಂಬರ್ 6 ರಂದು ಪೂರ್ವ ನಿಯೋಜನೆಯಂತೆ ತನ್ನ ಮೊದಲ ಸೂರ್ಯನ ಚಿತ್ರಗಳನ್ನು ಸೆರೆಹಿಡಿಯಿತು. ಈ ಅಭೂತಪೂರ್ವ ಚಿತ್ರಗಳನ್ನು 11 ವಿಭಿನ್ನ ಫಿಲ್ಟರ್‌ಗಳನ್ನು ಬಳಸಿ ತೆಗೆಯಲಾಗಿದೆ. ಮೊದಲ ಬಾರಿಗೆ ಪೂರ್ಣ ಡಿಸ್ಕ್ ಸೂರ್ಯನ ತೋರಿಸುತ್ತದೆ. ಸೂರ್ಯನ ಸಂಪೂರ್ಣ ಡಿಸ್ಕ್ ಚಿತ್ರಗಳನ್ನು ಇತರ ವೀಕ್ಷಣಾಲಯಗಳಿಂದ ಅಧ್ಯಯನ ಮಾಡಲಾಗಿದೆ.