ಸ್ಯಾನ್ ಫ್ರಾನ್ಸಿಸ್ಕೊ : ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಟ್ವಿಟರ್ ಬುಧವಾರದಿಂದ ಎನ್ಕ್ರಿಪ್ಟೆಡ್ (ಗೂಢಲಿಪಿ) ಮೆಸೇಜಿಂಗ್ ಸೇವೆಯನ್ನು ಆರಂಭಿಸಿದೆ. ಇದರ ಮೂಲಕ ಬಳಕೆದಾರರು ಇನ್ನು ಮುಂದೆ ಟ್ವಿಟರ್ನಲ್ಲಿ ಮೊದಲಿಗಿಂತಲೂ ಹೆಚ್ಚು ಸುರಕ್ಷಿತವಾಗಿ ಸಂವಹನ ನಡೆಸಬಹುದು. ಆದರೆ ಈ ಸೇವೆ ಈಗಿನ್ನೂ ಆರಂಭಿಕ ಹಂತದಲ್ಲಿದ್ದು, ಅಷ್ಟೊಂದು ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿಲ್ಲ ಎನ್ನಲಾಗಿದೆ. ಹ್ಯಾಕರ್ಗಳು ಮತ್ತು ಇತರ ಸೈಬರ್ ವಂಚಕರಿಂದ ಮೆಸೇಜುಗಳಿಗೆ ರಕ್ಷಣೆ ನೀಡಲು ಅತಿ ಅಗತ್ಯವಾದ ಸುರಕ್ಷತಾ ಕವಚಗಳೇ ಹೊಸ ಸೇವೆಯಲ್ಲಿ ಇಲ್ಲ ಎಂದು ಸೈಬರ್ ತಜ್ಞರು ಹೇಳಿದ್ದಾರೆ.
ಹೊಸ ಸೇವೆ ಬಳಸಬೇಕಾದರೆ ಸೆಂಡರ್ ಮತ್ತು ರಿಸೀವರ್ ಇಬ್ಬರೂ ಪ್ರತಿ ತಿಂಗಳಿಗೆ 11 ಡಾಲರ್ (ಡೆಸ್ಕ್ಟಾಪ್ ಮಾತ್ರ ಆವೃತ್ತಿಗೆ 8 ಡಾಲರ್) ಪಾವತಿಸಿ ಪಡೆಯುವ ಟ್ವಿಟರ್ ಬ್ಲೂ ಸರ್ವಿಸ್ನ ಚಂದಾದಾರರಾಗಿರಬೇಕಾಗುತ್ತದೆ ಅಥವಾ ತಿಂಗಳಿಗೆ 1000 ಡಾಲರ್ ಪಾವತಿಸುವ ಹಾಗೂ ಪ್ರತಿ ಬಳಕೆದಾರನಿಗೆ 50 ಡಾಲರ್ ಪಾವತಿಸುವ ಚಂದಾದಾರಿಕೆ ಪಡೆದ ಸಂಸ್ಥೆಯ ಪ್ರತಿನಿಧಿಯಾಗಿರಬೇಕಾಗುತ್ತದೆ. ಹೊಸ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಸರ್ವಿಸ್ಗೆ ಶೀಘ್ರದಲ್ಲೇ ಇನ್ನಷ್ಟು ಉಪಯುಕ್ತ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಕಂಪನಿ ಹೇಳಿದೆ. "ಸದ್ಯಕ್ಕೆ ಇದನ್ನು ಟ್ರೈ ಮಾಡಿ, ಆದರೆ ಈಗಲೇ ಇದನ್ನು ನಂಬಬೇಡಿ" ಎಂದು ಸಿಇಓ ಎಲೋನ್ ಮಸ್ಕ್ ಟ್ವೀಟ್ ಮಾಡಿರುವುದು ಕುತೂಹಲಕರವಾಗಿದೆ.
ಎನ್‌ಕ್ರಿಪ್ಟ್ ಮಾಡಿದ ಸಂದೇಶ ಎಂದರೇನು? : ಇಮೇಲ್, ಡೈರೆಕ್ಟ್ ಮೆಸೇಜ್, ಟ್ವಿಟರ್ ಅಥವಾ ಇತರ ವಿಧಾನಗಳ ಮೂಲಕ ಇಂಟರ್ನೆಟ್‌ನಾದ್ಯಂತ ಕಳುಹಿಸುವ ಸಾಮಾನ್ಯ ಸಂದೇಶಗಳನ್ನು ಮಧ್ಯದಲ್ಲಿ ಬೇರೆಯವರು ಹ್ಯಾಕ್ ಮಾಡಿ ಓದುವ ಸಾಧ್ಯತೆಯಿರುತ್ತದೆ. ಅಂದರೆ ಅವುಗಳನ್ನು ಕಳುಹಿಸುವ ವ್ಯವಸ್ಥೆಯು ಶೇಕಡಾ ನೂರರಷ್ಟು ಸುರಕ್ಷಿತವಾಗಿರುವುದಿಲ್ಲ. ಇನ್ನೊಂದು ರೀತಿಯಲ್ಲಿ ನಿಮಗೆ ಮೆಸೇಜಿಂಗ್ ಸರ್ವಿಸ್ ನೀಡುವ ಕಂಪನಿಯೇ ನಿಮ್ಮ ಮೆಸೇಜುಗಳನ್ನು ಓದುವ ಸಾಧ್ಯತೆಯಿರುತ್ತದೆ. ಇನ್ನು ಕೆಲವೊಮ್ಮೆ ಕೋರ್ಟ್ ಕೇಸ್ ಅಥವಾ ಪೊಲೀಸರು ಕೇಳಿದಾಗ ಮೆಸೇಜಿಂಗ್ ಸರ್ವಿಸ್ ನೀಡುವ ಕಂಪನಿಗಳು ನಿಮ್ಮ ಮೆಸೇಜುಗಳ ಮಾಹಿತಿಯನ್ನು ಅವರಿಗೆ ನೀಡುವ ಸಾಧ್ಯತೆಯಿರುತ್ತದೆ. ಹೀಗಿರುವಾಗ ಎನ್‌ಕ್ರಿಪ್ಟ್ ಮಾಡಲಾದ ಮೆಸೇಜುಗಳನ್ನು ಕಳುಹಿಸಿದವರು ಮತ್ತು ಅದನ್ನು ಸ್ವೀಕರಿಸಿದವರು ಮಾತ್ರ ಓದಲು ಸಾಧ್ಯ.