ವಾಷಿಂಗ್ಟನ್ (ಯುಎಸ್): OpenAI ತಯಾರಿಸಿರುವ ಚಾಟ್ಜಿಪಿಟಿ ಚಾಟ್‌ಬಾಟ್ ಮುಂದಿನ ದಿನಗಳಲ್ಲಿ ಮನುಷ್ಯರ ಬುದ್ಧಿವಂತಿಕೆಯನ್ನು ಮೀರಿ ಬೆಳೆಯಲಿವೆ ಎಂದು ವರದಿಗಳು ತಿಳಿಸಿವೆ. ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಆಗಿರುವ ಚಾಟ್ಜಿಪಿಟಿ ಅಗಾಧ ಪ್ರಮಾಣದ ಡೇಟಾವನ್ನು ತನ್ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು, ಅದನ್ನು ವಿಶ್ಲೇಷಿಸಬಹುದು ಮತ್ತು ನಂತರ GPT-4 ಭಾಷಾ ಸಂಸ್ಕರಣಾ ಮಾದರಿಯ ಆಧಾರದ ಮೇಲೆ ಕಂಟೆಂಟ್ ಅನ್ನು ರಚಿಸಬಹುದು. ಅಷ್ಟೇ ಅಲ್ಲದೆ ಅದಕ್ಕೆ ಯಾವುದೇ ಪ್ರಶ್ನೆ ಕೇಳಿದರೂ ಅದು ಉತ್ತರಿಸಬಲ್ಲದು. ಆದರೆ ಇದೆಲ್ಲವೂ ಈಗ ಆರಂಭವಾಗಿವೆ ಅಷ್ಟೆ. ಮುಂದಿನ ದಿನಗಳಲ್ಲಿ ಚಾಟ್ಬಾಟ್ನ ಕೃತಕ ಬುದ್ಧಿಮತ್ತೆಯನ್ನು ಹೀಗೆಯೇ ಬೆಳೆಯಲು ಬಿಟ್ಟರೆ ಮಾನವ ಕುಲಕ್ಕೆ ಕಂಟಕವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಚಾಟ್‌ಬಾಟ್ ಮಾನವನನ್ನು ಮೀರಿ ಬೆಳೆಯುವ ವಿಷಯವನ್ನು ಹೊರತುಪಡಿಸಿ ನೋಡಿದರೆ, AI ಚಾಟ್‌ಬಾಟ್ ನಿಜವಾಗಿಯೂ ಪ್ರಯೋಜನಕಾರಿ ಸಾಧನವಾಗಿದ್ದು ಅದು ಮಾನವರ ಕೆಲಸದಲ್ಲಿನ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದು. ಇದು ಅಂತರ್ಜಾಲದಲ್ಲಿನ ಮಾಹಿತಿಯನ್ನು ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಪಡೆದುಕೊಳ್ಳುವ ನೇರ ಮೂಲವಾಗಿ ಕಾರ್ಯನಿರ್ವಹಿಸಬಹುದು. ಇದರಿಂದ ಬಳಕೆದಾರರು ಸುಖಾಸುಮ್ಮನೆ ಹುಡುಕಾಟದಲ್ಲಿ ಕಾಲ ಕಳೆಯದೇ ತಮಗೆ ಬೇಕಾದ ಮಾಹಿತಿಯನ್ನು ತಕ್ಷಣವೇ ಪಡೆಯಬಹುದು.
ನಿರ್ದಿಷ್ಟ ಡೇಟಾ ಪಾಯಿಂಟ್‌ನಲ್ಲಿ ಬಳಕೆದಾರರಿಗೆ ಮಾಹಿತಿಯನ್ನು ಒದಗಿಸಲು ಇದು ಬೃಹತ್ ಪ್ರಮಾಣದ ಪಠ್ಯವನ್ನು ತಕ್ಷಣವೇ ಪರಿಶೀಲಿಸಬಹುದು. ಇತ್ತೀಚೆಗೆ ನಾಯಿಯೊಂದಕ್ಕೆ ಯಾವ ಕಾಯಿಲೆಯಾಗಿದೆ ಎಂಬುದನ್ನು ಗುರುತಿಸಲು ಚಾಟ್ಜಿಪಿಟಿ ಸಹಾಯ ಮಾಡಿತ್ತು ಹಾಗೂ ಆ ಮೂಲಕ ನಾಯಿಯ ಜೀವ ಉಳಿಸಿತ್ತು. ಇದನ್ನು ನೋಡಿ ಪಶುವೈದ್ಯರೇ ಆಶ್ಚರ್ಯಚಕಿತರಾಗಿದ್ದಾರೆ.