ನವದೆಹಲಿ:ಆಕ್ಸ್‌ಫರ್ಡ್ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗಗಳ ಎರಡನೇ ಮತ್ತು ಮೂರನೇ ಹಂತಗಳನ್ನು ನಡೆಸಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ (ಎಸ್‌ಐಐ) ಅನುಮತಿ ನೀಡಬೇಕು ಎಂದು ಕೋವಿಡ್ -19ರ ವಿಷಯ ತಜ್ಞರ ಸಮಿತಿ ದೇಶದ ಔಷಧ ನಿಯಂತ್ರಕರಿಗೆ ಶಿಫಾರಸು ಮಾಡಿದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿಡಿಎಸ್ಕೊ) ನಲ್ಲಿನ ಸಮಿತಿಯ ಶಿಫಾರಸುಗಳನ್ನು ಅನುಮೋದನೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ (ಡಿಸಿಜಿಐ) ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಎಸ್‌ಐಐಯ ಅರ್ಜಿಯ ಕುರಿತು ಚರ್ಚಿಸಿದ ನಂತರ ತಜ್ಞರ ಸಮಿತಿಯು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ತಿಳಿದು ಬಂದಿದೆ. ಹೆಚ್ಚುವರಿ ಮಾಹಿತಿಯನ್ನು ಪಡೆಯುವುದರ ಜೊತೆಗೆ ಪ್ರಯೋಗಗಳಿಗೆ ಪ್ರೋಟೋಕಾಲ್ಗಳನ್ನು ಪರಿಷ್ಕರಿಸಲು ಹೇಳಿದ್ದಾರೆ.
ಪರಿಷ್ಕೃತ ಪ್ರಸ್ತಾವನೆಯ ಪ್ರಕಾರ, ಏಮ್ಸ್ ದೆಹಲಿ, ಬಿಜೆ ವೈದ್ಯಕೀಯ ಕಾಲೇಜು ಪುಣೆ, ರಾಜೇಂದ್ರ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಪಾಟ್ನಾ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಚಂಡೀಘಡ, ಏಮ್ಸ್ ಜೋಧ್‌ಪುರ, ಗೋರಖ್‌ಪುರದ ನೆಹರು ಆಸ್ಪತ್ರೆ, ವಿಶಾಖಪಟ್ಟಣಂನ ಆಂಧ್ರ ವೈದ್ಯಕೀಯ ಕಾಲೇಜು ಮತ್ತು ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಸೆಂಟರ್ ಸೇರಿದಂತೆ ಆಯ್ದ 17 ತಾಣಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 1,600 ಜನರು ಪ್ರಯೋಗಗಳಲ್ಲಿ ಭಾಗವಹಿಸಲಿದ್ದಾರೆ.