ಹೈದರಾಬಾದ್:ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಎಂಬುವುದು ಸ್ಥಳೀಯ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾದ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಉಪಗ್ರಹ ವಾಹಕವಾಗಿದೆ. 1993ರಲ್ಲಿ ಮೊದಲ ಬಾರಿಗೆ ಉಡಾವಣೆಗೊಂಡ ಇದು, ಈವರೆಗೆ ಒಟ್ಟು 374 ಉಪಗ್ರಹಗಳನ್ನು (46 ದೇಶೀಯ ಮತ್ತು 328 ವಿದೇಶಿ) ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿದೆ.
ಪ್ರತಿಷ್ಠಿತ ಚಂದ್ರಯಾನ -1, ಮಾರ್ಸ್ ಆರ್ಬಿಟರ್ ಮಿಷನ್, ಸ್ಪೇಸ್ ಕ್ಯಾಪ್ಸುಲ್ ರಿಕವರಿ ಲಾಂಚ್, ಇಂಡಿಯನ್ ರೀಜನಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಇತ್ಯಾದಿಗಳನ್ನು ಈ ವಾಹಕವು ಉಡಾವಣೆ ಮಾಡಿದೆ.
ಇಸ್ರೋ 1970-80ರ ಅವಧಿಯಲ್ಲಿ ಉಪಗ್ರಹ ಉಡಾವಣಾ ವಾಹನದ (ಎಸ್‌ಎಲ್‌ವಿ) ಮೂಲಕ ಬಾಹ್ಯಾಕಾಶ ಪ್ರಯಾಣವನ್ನು ಪ್ರಾರಂಭಿಸಿತು. ಬಳಿಕ ಆಗ್ಮೆಂಟೆಡ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಎಸ್‌ಎಲ್‌ವಿ) ನಿರ್ಮಿಸಿ, ಅದನ್ನು ಬಳಸಿತು. ಪಿಎಸ್‌ಎಲ್‌ವಿ ರಾಕೆಟನ್ನು 1990-2000ರ ಅವಧಿಯಲ್ಲಿ ನಿರ್ಮಿಸಲಾಯಿತು.
ವೈಫಲ್ಯದಿಂದ ಯಶಸ್ಸಿನವರೆಗೆ:
ಸೆಪ್ಟೆಂಬರ್ 20, 1993ರಂದು, ಪಿಎಸ್‌ಎಲ್‌ವಿ-ಡಿ 1 ಅನ್ನು ಪಿಎಸ್‌ಎಲ್‌ವಿ-ಜಿ ವಾಹಕದ ಮೂಲಕ ಉಡಾವಣೆಗೊಳಿಸಲಾಯಿತು, ಆದರೆ ವಿಫಲವಾಯಿತು. ನಂತರ, 1994 ಮತ್ತು 1996ರಲ್ಲಿ, ಪಿಎಸ್‌ಎಲ್‌ವಿ-ಡಿ 2 ಮತ್ತು ಡಿ 3 ಪ್ರಯೋಗಗಳನ್ನು ನಡೆಸಲಾಯಿತು. ಇವೆರಡೂ ಯಶಸ್ವಿಯಾದವು. ಅಂದಿನಿಂದ ‘ಸಿ’ ಸರಣಿಯ ಪ್ರಯೋಗಗಳು ಪ್ರಾರಂಭವಾಗಿವೆ.
ಪಿಎಸ್‌ಎಲ್‌ವಿ-ಸಿ 1 ಅನ್ನು ಸೆಪ್ಟೆಂಬರ್ 29, 1997ರಂದು ಉಡಾಯಿಸಲಾಯಿತು. ಐಆರ್ಎಸ್ -1 ಡಿ ಉಪಗ್ರಹವನ್ನು ಸೌರ ಕಕ್ಷೆಗೆ ಉಡಾಯಿಸಲಾಯಿತು. ಹಲವಾರು ಪ್ರಯೋಗಗಳನ್ನು ನಡೆಸಿದರೂ, ಪಿಎಸ್‌ಎಲ್‌ವಿ-ಸಿ 13 ಪ್ರಯೋಗವನ್ನು ಮಾತ್ರ ನಡೆಸಲಾಗಿಲ್ಲ.
ಕ್ರಮೇಣ ಸುಧಾರಣೆ:
ವಾಹಕದ ಸಾಗಿಸುವ ಸಾಮರ್ಥ್ಯವನ್ನು ಅಗತ್ಯ ಅವಶ್ಯಕತೆಗಳನ್ನು ಪೂರೈಸಲು ಸುಧಾರಿಸಲಾಗುತ್ತಿದೆ. 1993ರಲ್ಲಿ ಪಿಎಸ್‌ಎಲ್‌ವಿ-ಜಿಎ ಎಂದು ಗುರುತಿಸಲ್ಪಟ್ಟ ವಾಹಕವು, ಬಳಿಕ ಏಪ್ರಿಲ್ 23, 2007ರ ಉಡಾವಣೆಗೆ ಪಿಎಸ್‌ಎಲ್‌ವಿ-ಸಿಎ ಆಗಿ ಮಾರ್ಪಟ್ಟಿತು.
ಅಕ್ಟೋಬರ್ 22ರಂದು ಚಂದ್ರಯಾನ -1 ಉಡಾವಣೆಯ ಮೂಲಕ ಇದನ್ನು ಎಕ್ಸೆಲ್ ಆಗಿ, ಜನವರಿ 24, 2019ರಂದು ಪಿಎಸ್‌ಎಲ್‌ವಿ-ಡಿಎಲ್ ಆಗಿ ಮತ್ತು 2019ರ ಏಪ್ರಿಲ್ 1ರ ಉಡಾವಣೆಗೆ ಪಿಎಸ್‌ಎಲ್‌ವಿ-ಕ್ಯೂಎಲ್ ಆಗಿ ಪರಿವರ್ತಿಸಲಾಯಿತು.
ಈ ವಾಹಕವು ತಾಂತ್ರಿಕವಾಗಿ ಐದು ಪ್ರಕಾರಗಳಾಗಿ ಬದಲಾಗಿದ್ದು, ಪ್ರತಿ ಬಾರಿಯೂ ಯಶಸ್ಸು ಗಳಿಸುತ್ತಿದೆ. ಒಟ್ಟು ಪಿಎಸ್‌ಎಲ್‌ವಿ ವಾಹಕಗಳಲ್ಲಿ, ಪಿಎಸ್‌ಎಲ್‌ವಿ-ಡಿ 1 ಮತ್ತು ಪಿಎಸ್‌ಎಲ್‌ವಿ-ಸಿ 39 ಪ್ರಯೋಗಗಳು ಮಾತ್ರ ವಿಫಲವಾಗಿವೆ.
ಉಪಗ್ರಹಗಳನ್ನು ಒಯ್ಯುವುದು:
1999ರಿಂದ, 34 ದೇಶಗಳ ಒಟ್ಟು 328 ಉಪಗ್ರಹಗಳನ್ನು ಸಾಗಿಸಿ ಯಶಸ್ವಿಯಾಗಿ ಕಕ್ಷೆಯಲ್ಲಿ ಇರಿಸಲಾಗಿದೆ.
ಈ ಟಿವಿ ಭಾರತ್ ಜೊತೆ ಮಾತನಾಡಿದ ಸತೀಶ್ ಧವನ್ ಸ್ಪೇಸ್ ಸೆಂಟರ್ನ ನಿವೃತ್ತ ಸಹಾಯಕ ನಿರ್ದೇಶಕ ವೆಲ್ಲಂಕಿ ಶೇಷಗಿರಿ ರಾವ್, "ಪಿಎಸ್‌ಎಲ್‌ವಿ ಇಸ್ರೋಗೆ ಅಪಾರ ಮನ್ನಣೆ ನೀಡಿದ್ದು, ಇದು ಜಾಗತಿಕವಾಗಿ ಭಾರತದ ಖ್ಯಾತಿಯನ್ನು ಹೆಚ್ಚಿಸಿದೆ. ಇದರಿಂದ ಇಸ್ರೋ ಅನೇಕ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ. ವಿದೇಶಿ ಉಪಗ್ರಹಗಳನ್ನು ಕಕ್ಷೆಯಲ್ಲಿ ಇರಿಸಲು ಪಿಎಸ್‌ಎಲ್‌ವಿ ಸರಣಿಯು 50ನೇ ವಾಹಕವನ್ನು ಬಿಡುಗಡೆ ಮಾಡುತ್ತಿರುವುದು ಬಹಳ ಸಂತೋಷದ ಸಂಗತಿಯಾಗಿದೆ. ನಿರಂತರ ಶ್ರಮದ ಮೂಲಕ ಸ್ಥಳೀಯವಾಗಿ ತಾಂತ್ರಿಕ ಪರಿಣತಿಯನ್ನು ಪಡೆದುಕೊಳ್ಳುವ ಮೂಲಕ ಇಸ್ರೋ ವಿಶ್ವದಲ್ಲೇ ಅದ್ಭುತ ಶಕ್ತಿಯಾಗಿ ಮಾರ್ಪಟ್ಟಿದ್ದು, ಜಾಗತಿಕ ಉಪಗ್ರಹ ಮಾರುಕಟ್ಟೆಯಲ್ಲಿ ಸ್ಥಿರ ಸ್ಥಾನವನ್ನು ಪಡೆದುಕೊಂಡಿದೆ" ಎಂದು ಅವರು ಹೇಳಿದರು.