ಕರ್ನಾಟಕ

karnataka

ETV Bharat / science-and-technology

ಸಮುದ್ರಯಾನ್: ಆರು ಸಾವಿರ ಮೀಟರ್​ ಆಳಕ್ಕಿಳಿಯಲಿದೆ ಮತ್ಸ್ಯ 6000 ವಾಹನ - ಭಾರತದ ಕರಾವಳಿ

ಭಾರತದ ಕರಾವಳಿಯ ಉದ್ದ 7,517 ಕಿಮೀ. ಕಡಲಾಳದಲ್ಲಿನ ಪ್ರಮುಖ ಸಂಪನ್ಮೂಲಗಳನ್ನು ಅನ್ವೇಷಿಸಲು ಸಮುದ್ರಯಾನ್ ಮಿಷನ್. ಇದಕ್ಕಾಗಿ ರೂ.4,077 ಕೋಟಿ ವೆಚ್ಚದ ಡೀಪ್ ಓಶಿಯನ್ ಮಿಷನ್​ಗೆ ಅನುಮೋದನೆ.

ಸಮುದ್ರಯಾನ್
Samudrayan

By

Published : Aug 17, 2022, 3:05 PM IST

ಭೂಮಿಯ ಮೇಲ್ಮೈ ಸುಮಾರು ಶೇ 70 ರಷ್ಟು ಭಾಗ ಸಾಗರಗಳಿಂದ ಆವರಿಸಿಕೊಂಡಿದೆ. ಅವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾನವರ ಜೀವನದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಆದರೆ ಸಾಗರಗಳ ಆಳದಲ್ಲಿನ ಅನೇಕ ವಿಷಯಗಳು ಮನುಷ್ಯರ ಕಲ್ಪನೆಗೆ ಇನ್ನೂ ಎಟುಕದ ಪ್ರಶ್ನೆಗಳಾಗಿವೆ. ಈ ಸಂದರ್ಭದಲ್ಲಿ ಕಡಲಾಳದಲ್ಲಿನ ಪ್ರಮುಖ ಸಂಪನ್ಮೂಲಗಳನ್ನು ಅನ್ವೇಷಿಸಲು ಭಾರತ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿಷ್ಠಿತ ಸಮುದ್ರಯಾನ್ ಮಿಷನ್ ಪ್ರಾರಂಭಿಸಿದೆ. ಸಾಗರಗಳ ಆಳದಲ್ಲಿ ಅಧ್ಯಯನ ನಡೆಸಲು ಮಾನವಸಹಿತ ಸಬ್​ಮರ್ಸಿಬಲ್ ವಾಹನವನ್ನು ಕಳುಹಿಸುವುದು ಈ ಮಿಷನ್​ನ ಭಾಗವಾಗಿದೆ.

ಮತ್ಸ್ಯ 6000 ವಾಹನ

ಮತ್ಸ್ಯ 6000 ವಾಹನ ತಯಾರಿಗೆ ಸಿದ್ಧತೆ:ಸಮುದ್ರಯಾನ ಇದು ಸಾಗರಗಳಲ್ಲಿ ಭಾರತದ ಮೊದಲ ಮಾನವಸಹಿತ ಮಿಷನ್ ಆಗಿದೆ. ಸ್ವಯಂ ಚಾಲಿತ ಸಬ್​ಮರ್ಸಿಬಲ್ ಯಂತ್ರವನ್ನು ಅಭಿವೃದ್ಧಿಪಡಿಸುವುದು ಈ ಮಿಷನ್​ನ ಉದ್ದೇಶಗಳಲ್ಲಿ ಒಂದಾಗಿದೆ. ಆ ಗುರಿಯನ್ನು ತಲುಪುವ ಪ್ರಯತ್ನದ ಭಾಗವಾಗಿ ಭಾರತವು ಈಗಾಗಲೇ ದೇಶೀಯವಾಗಿ 'ಮತ್ಸ್ಯ 6000' ಹೆಸರಿನ ಸಬ್‌ಮರ್ಸಿಬಲ್ ವಾಹನದ ಮೂಲ ವಿನ್ಯಾಸವನ್ನು ಅಭಿವೃದ್ಧಿಪಡಿಸಿದೆ. ಇದು ಆಳವಾದ ಸಾಗರದಲ್ಲಿ 12 ಗಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲದು. ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದರೆ ಇದು 96 ಗಂಟೆಗಳ ಕಾಲ ಸಮುದ್ರ ಗರ್ಭದಲ್ಲಿ ಉಳಿಯಬಹುದು. ಇಸ್ರೊ ಮತ್ತು ಡಿಆರ್​ಡಿಓ ನಂಥ ಪ್ರಮುಖ ಸಂಸ್ಥೆಗಳು ಈ ಯಂತ್ರವನ್ನು ಮತ್ತಷ್ಟು ಸುಧಾರಣೆ ಮಾಡಲಿವೆ.

ಅದು ಎಷ್ಟು ಆಳಕ್ಕೆ ಹೋಗುತ್ತದೆ?:ಸಮುದ್ರಯಾನದ ಅಂಗವಾಗಿ, ಮೂರು ತಜ್ಞರ ತಂಡಗಳನ್ನು ನೀರಿನ ಮೇಲ್ಮೈಯಿಂದ ಸುಮಾರು 6 ಸಾವಿರ ಮೀಟರ್ ಆಳಕ್ಕೆ ಕಳುಹಿಸಲಾಗುವುದು. ಈ ತಂಡಗಳು ಸಾಗರದ ಜಲಾನಯನ ಪ್ರದೇಶದಲ್ಲಿ ಹಿಂದೆಂದೂ ಅನ್ವೇಷಿಸದ ಪ್ರದೇಶಗಳನ್ನು ನೇರವಾಗಿ ವೀಕ್ಷಿಸುತ್ತವೆ ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಿವೆ. 'ಮತ್ಸ್ಯ 6000' ನಲ್ಲಿ ಅಳವಡಿಸಲಾಗಿರುವ ಹಲವು ಅತ್ಯಾಧುನಿಕ ಸಂವೇದಕಗಳು ಮತ್ತು ವೈಜ್ಞಾನಿಕ ಉಪಕರಣಗಳು ಈ ಕಾರ್ಯದಲ್ಲಿ ಅವರಿಗೆ ಸಹಾಯ ಮಾಡಲಿವೆ. ಪಾಲಿಮೆಟಾಲಿಕ್ ಮ್ಯಾಂಗನೀಸ್ ಗಂಟುಗಳು, ಅನಿಲ ಹೈಡ್ರೇಟ್‌ಗಳು, ಹೈಡ್ರೋಥರ್ಮಲ್ ಸಲ್ಫೈಡ್‌ಗಳು ಮತ್ತು ಕೋಬಾಲ್ಟ್ ಕ್ರಸ್ಟ್‌ಗಳಂತಹ ಸಂಪನ್ಮೂಲಗಳ ಪರಿಶೋಧನೆಯಲ್ಲಿ ಈ ಮಿಷನ್ ಸಹಾಯ ಮಾಡಲಿದೆ. ವಿಶೇಷವಾಗಿ ಸಮುದ್ರದ ಮೇಲ್ಮೈಯಿಂದ 1,000 ರಿಂದ 5,500 ಮೀಟರ್‌ ಆಳದಲ್ಲಿ ಈ ಅನ್ವೇಷಣೆಗಳು ನಡೆಯಲಿವೆ.

ಕಡಲಾಳದ ಒಂದು ದೃಶ್ಯ

ಸಮುದ್ರಯಾನ್ ಏಕೆ ಮುಖ್ಯ?:ಭಾರತವು 7,517 ಕಿಮೀ ಉದ್ದದ ಕರಾವಳಿಯನ್ನು ಹೊಂದಿದೆ. 9 ಕರಾವಳಿ ರಾಜ್ಯಗಳು ಮತ್ತು 1,382 ದ್ವೀಪಗಳು ದೇಶದಲ್ಲಿವೆ. ಕಡಲು ಆರ್ಥಿಕತೆಯನ್ನು ದೇಶದ ಅಭಿವೃದ್ಧಿಗೆ ವೇಗವರ್ಧಕವಾಗುವ ಸಾಮರ್ಥ್ಯವನ್ನು ಹೊಂದಿರುವ ಟಾಪ್ 10 ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಸರ್ಕಾರವು ಪರಿಗಣಿಸಿದೆ. ಹೀಗಾಗಿ ಸಮುದ್ರತಳದಲ್ಲಿನ ಸಂಪನ್ಮೂಲಗಳ ಪರಿಶೋಧನೆಯು ಅನಿವಾರ್ಯವಾಗಿದೆ. ಅದಕ್ಕಾಗಿಯೇ ಕೇಂದ್ರವು ರೂ.4,077 ಕೋಟಿ ವೆಚ್ಚದ ಡೀಪ್ ಓಶಿಯನ್ ಮಿಷನ್ (DOM)' ಅನ್ನು ಅನುಮೋದಿಸಿದೆ. ಸಮುದ್ರಯಾನ್ ಮಿಷನ್ ಇದು 'ಡೀಪ್ ಓಶಿಯನ್ ಮಿಷನ್ ನ ಒಂದು ಭಾಗವಾಗಿದೆ.

ABOUT THE AUTHOR

...view details