ಕರ್ನಾಟಕ

karnataka

ETV Bharat / science-and-technology

2023ರ 4ನೇ ತ್ರೈಮಾಸಿಕದಲ್ಲಿ ಸ್ಯಾಮ್​ಸಂಗ್ ಲಾಭ ಶೇ 35ರಷ್ಟು ಕುಸಿತ ನಿರೀಕ್ಷೆ - ನಾಲ್ಕನೇ ತ್ರೈಮಾಸಿಕ

ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್​ ಕಂಪನಿಯ ಲಾಭವು ಕಳೆದ ವರ್ಷದ 4ನೇ ತ್ರೈಮಾಸಿಕದಲ್ಲಿ ಶೇ 35ರಷ್ಟು ಕುಸಿಯುವ ಅಂದಾಜು ಮಾಡಲಾಗಿದೆ.

Samsung flags 35% slip in Q4 2023 profit
Samsung flags 35% slip in Q4 2023 profit

By ETV Bharat Karnataka Team

Published : Jan 9, 2024, 1:25 PM IST

ಸಿಯೋಲ್ :ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ತನ್ನ ಕಾರ್ಯಾಚರಣೆ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 35 ರಷ್ಟು ಕುಸಿಯಲಿದೆ ಎಂದು ಮಂಗಳವಾರ ನಿರೀಕ್ಷೆ ಮಾಡಿದೆ. ಮೆಮೊರಿ ಚಿಪ್​ಗಳು ಮತ್ತು ಸ್ಮಾರ್ಟ್​ಫೋನ್​ಗಳ ವಿಶ್ವದ ಅತಿದೊಡ್ಡ ತಯಾರಕ ಕಂಪನಿ ಸ್ಯಾಮ್​ಸಂಗ್ ತನ್ನ ನಾಲ್ಕನೇ ತ್ರೈಮಾಸಿಕದ ಕಾರ್ಯಾಚರಣೆ ಲಾಭವು 2.8 ಟ್ರಿಲಿಯನ್ ವೋನ್ (2.1 ಬಿಲಿಯನ್ ಡಾಲರ್) ಆಗಬಹುದು ಎಂದು ಅಂದಾಜಿಸಿದೆ. 2022ರ ಇದೇ ತ್ರೈಮಾಸಿಕದಲ್ಲಿ ಕಂಪನಿ 4.3 ಟ್ರಿಲಿಯನ್ ವೋನ್ ಲಾಭ ಗಳಿಸಿತ್ತು.

ಯೋನ್ಹಾಪ್ ನ್ಯೂಸ್ ಏಜೆನ್ಸಿಯ ಹಣಕಾಸು ದತ್ತಾಂಶ ಸಂಸ್ಥೆ ಯೋನ್ಹಾಪ್ ಇನ್ಫೋಮ್ಯಾಕ್ಸ್ ಸಮೀಕ್ಷೆಯು ಕಂಪನಿ ಅಂದಾಜು 3.9 ಟ್ರಿಲಿಯನ್ ವೋನ್ ಲಾಭ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಯನ್ನು ಕಂಪನಿ ತಲುಪಿಲ್ಲ. ನಾಲ್ಕನೇ ತ್ರೈಮಾಸಿಕದಲ್ಲಿ ಮಾರಾಟವು ಶೇಕಡಾ 4.9 ರಷ್ಟು ಕುಸಿದು 67 ಟ್ರಿಲಿಯನ್ ವೋನ್​ಗೆ ತಲುಪಿದೆ ಎಂದು ಅಂದಾಜಿಸಲಾಗಿದೆ ಎಂದು ಸ್ಯಾಮ್​ಸಂಗ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

2023 ರಲ್ಲಿ, ಸ್ಯಾಮ್​ಸಂಗ್​ನ ಕಾರ್ಯಾಚರಣೆ ಲಾಭವು ಶೇಕಡಾ 85 ರಷ್ಟು ಕುಸಿದು 6.54 ಟ್ರಿಲಿಯನ್ ವೋನ್​ಗೆ ತಲುಪುವ ನಿರೀಕ್ಷೆಯಿದೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಸ್ಯಾಮ್​ಸಂಗ್​ನ ವಾರ್ಷಿಕ ಕಾರ್ಯಾಚರಣೆ ಲಾಭವು 10 ಟ್ರಿಲಿಯನ್ ವೋನ್​ಗಿಂತ ಕಡಿಮೆಯಾಗಿದೆ. ಈ ಘೋಷಣೆಯ ನಂತರ ಸ್ಯಾಮ್​ಸಂಗ್ ಷೇರು ಬೆಲೆಗಳು ಶೇಕಡಾ 0.65 ರಷ್ಟು ಏರಿಕೆಯಾಗಿವೆ.

ಕಳೆದ ವರ್ಷ, ವಾರ್ಷಿಕ ಮಾರಾಟವು ಶೇಕಡಾ 15 ರಷ್ಟು ಕುಸಿದು 258.16 ಟ್ರಿಲಿಯನ್ ವೋನ್​ಗೆ ತಲುಪುತ್ತದೆ ಎಂದು ಊಹಿಸಲಾಗಿತ್ತು. ಸ್ಯಾಮ್​ಸಂಗ್​ನ ಸೆಮಿಕಂಡಕ್ಟರ್ ವಿಭಾಗವು ಕಳೆದ ವರ್ಷ ಸುಮಾರು 2 ಟ್ರಿಲಿಯನ್ ವೋನ್ ಕಾರ್ಯಾಚರಣೆ ನಷ್ಟ ಅನುಭವಿಸಲಿದೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು. ಆದಾಗ್ಯೂ, ಸ್ಯಾಮ್​ಸಂಗ್​ನ ಸ್ಮಾರ್ಟ್​ಫೋನ್ ವಿಭಾಗವು ಕಳೆದ ವರ್ಷ ತನ್ನ ಪ್ರಮುಖ ಹ್ಯಾಂಡ್​ಸೆಟ್​ಗಳ ಅತ್ಯಧಿಕ ಮಾರಾಟದಿಂದಾಗಿ ಉತ್ತಮ ಲಾಭವನ್ನು ವರದಿ ಮಾಡುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದಕರಲ್ಲಿ ಒಂದಾಗಿದೆ. ಸ್ಯಾಮ್​ಸಂಗ್ ಉಪಕರಣಗಳು, ಡಿಜಿಟಲ್ ಮಾಧ್ಯಮ ಸಾಧನಗಳು, ಸೆಮಿಕಂಡಕ್ಟರ್​ಗಳು, ಮೆಮೊರಿ ಚಿಪ್​ಗಳು ಮತ್ತು ಸಂಯೋಜಿತ ವ್ಯವಸ್ಥೆಗಳು ಸೇರಿದಂತೆ ವಿವಿಧ ರೀತಿಯ ಗ್ರಾಹಕ ಮತ್ತು ಉದ್ಯಮ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ.

ಇದನ್ನೂ ಓದಿ : ಐಟಿ ನೇಮಕಾತಿ ಶೇ 21ರಷ್ಟು ಕುಸಿತ; ಎಐನಲ್ಲಿ ಉದ್ಯೋಗಾವಕಾಶ ಹೆಚ್ಚಳ

ABOUT THE AUTHOR

...view details