ನವದೆಹಲಿ: ಇತ್ತೀಚಿನ ಡೇಟಾ ಸೋರಿಕೆಯ ನಂತರ, ಸ್ಯಾಮ್‌ಸಂಗ್ ಜನರೇಟಿವ್ ಎಐ ಸಾಫ್ಟ್ವೇರ್ಗಳಾದ ಚಾಟ್‌ಜಿಪಿಟಿ, ಗೂಗಲ್ ಬಾರ್ಡ್ ಮತ್ತು ಬಿಂಗ್ ಎಐ ಚಾಟ್‌ಬಾಟ್‌ಗಳ ಬಳಕೆಯನ್ನು ನಿಷೇಧಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಂಪನಿಯು ತನ್ನ ದೊಡ್ಡ ವಿಭಾಗವೊಂದರ ಉದ್ಯೋಗಿಗಳಿಗೆ ಸೂಚಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸ್ಯಾಮ್‌ಸಂಗ್ ಎಂಜಿನಿಯರ್‌ಗಳು ಆಕಸ್ಮಿಕವಾಗಿ ChatGPT ಮೂಲಕ ಕಂಪನಿಯ ಸೂಕ್ಷ್ಮ ಡೇಟಾ ಸೋರಿಕೆ ಮಾಡಿದ ನಂತರ ಸ್ಯಾಮ್‌ಸಂಗ್ ಈ ನಿರ್ಧಾರಕ್ಕೆ ಬಂದಿದೆ.
ಎಐ ಜನರೇಟಿವ್ ಸಾಧನಗಳು ತಾವು ಬಳಸುವ ಡೇಟಾವನ್ನು ಎಕ್ಸಟರ್ನಲ್ ಸರ್ವರ್ಗಳಲ್ಲಿ ಸಂಗ್ರಹಿಸುತ್ತವೆ ಹಾಗೂ ಈ ಡೇಟಾ ಯಾವತ್ತಾದರೂ ದುರುಪಯೋಗವಾಗಬಹುದು ಎಂಬ ಕಾರಣದಿಂದ ಸ್ಯಾಮ್‌ಸಂಗ್ ಎಐ ಜನರೇಟಿವ್ ಟೂಲ್ಗಳನ್ನು ನಿರ್ಬಂಧಿಸಿದೆ. "ಚಾಟ್ ಜಿಪಿಟಿ ಮಾದರಿಯ ಎಐ ಜನರೇಟಿವ ಪ್ಲಾಟ್ಪಾರ್ಮ್ಗಳು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾಕಷ್ಟು ಜನಪ್ರಿಯವಾಗುತ್ತಿವೆ. ಈ ಪ್ಲಾಟ್ಫಾರ್ಮ್ಗಳು ಎಷ್ಟು ಉಪಯುಕ್ತವಾಗಿವೆ ಎಂಬುದನ್ನು ತಿಳಿದುಕೊಳ್ಳುವ ಸಮಯದಲ್ಲಿ ಅವುಗಳಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿಯಬೇಕು" ಎಂದು ಸ್ಯಾಮ್‌ಸಂಗ್ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಮೆಮೊದಲ್ಲಿ ಸೂಚಿಸಿದೆ.
ಸ್ಯಾಮ್‌ಸಂಗ್ ಎಂಜಿನಿಯರ್‌ಗಳು ಚಾಟ್‌ಜಿಪಿಟಿಯಲ್ಲಿ ಅಪ್ಲೋಡ್ ಮಾಡುವ ಮೂಲಕ ಆಂತರಿಕ ಸೋರ್ಸ್ ಕೋಡ್ ಅನ್ನು ಆಕಸ್ಮಿಕವಾಗಿ ಸೋರಿಕೆ ಮಾಡಿದ ನಂತರ ಕಂಪನಿಯು ಹೊಸ ನಿಯಮ ರೂಪಿಸಿದೆ ಎಂದು ಮೆಮೊ ಬಹಿರಂಗಪಡಿಸಿದೆ. "ಉದ್ಯೋಗಿಗಳ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ಜನರೇಟಿವ್ AI ಅನ್ನು ಸುರಕ್ಷಿತವಾಗಿ ಬಳಸಲು, ಸುರಕ್ಷಿತ ವಾತಾವರಣವನ್ನು ರಚಿಸಲು ಹೆಚ್ಚು ಭದ್ರತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ. ಆದಾಗ್ಯೂ, ಈ ಕ್ರಮಗಳನ್ನು ಸಿದ್ಧಪಡಿಸುವವರೆಗೆ, ನಾವು ಜನರೇಟಿವ್ ಎಐ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತಿದ್ದೇವೆ" ಎಂದು ಮೆಮೊ ಹೇಳಿದೆ. AI ಜನರೇಟಿವ್ ಸಾಫ್ಟವೇರ್ ಬಳಕೆಯ ಮೇಲಿನ ನಿಷೇಧವು ಸ್ಯಾಮ್‌ಸಂಗ್ ಮಾಲೀಕತ್ವದ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್ ಮತ್ತು ಫೋನ್‌ಗಳಿಗೆ ಅನ್ವಯಿಸುತ್ತದೆ.