ಕರ್ನಾಟಕ

karnataka

ETV Bharat / science-and-technology

ಪದಚ್ಯುತ ಓಪನ್ ಎಐ ಸಿಇಒ ಆಲ್ಟ್​ಮ್ಯಾನ್ ಸ್ವಂತ ಎಐ ಕಂಪನಿ ಆರಂಭಿಸುವ ಸಾಧ್ಯತೆ - ಚಾಟ್ ಜಿಪಿಟಿ ಡೆವಲಪರ್ ಓಪನ್ ಎಐನ

ಓಪನ್​ ಎಐನಿಂದ ಪದಚ್ಯುತ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ತಮ್ಮ ಸ್ವಂತದ ಎಐ ತಯಾರಿಕಾ ಕಂಪನಿ ಆರಂಭಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

Sacked Open AI CEO Altman likely to start his own AI company
Sacked Open AI CEO Altman likely to start his own AI company

By ETV Bharat Karnataka Team

Published : Nov 19, 2023, 12:35 PM IST

ಸ್ಯಾನ್ ಫ್ರಾನ್ಸಿಸ್ಕೋ: ಚಾಟ್ ಜಿಪಿಟಿ ಡೆವಲಪರ್ ಓಪನ್ ಎಐನ ಪದಚ್ಯುತ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ಈಗ ತಮ್ಮದೇ ಆದ ಹೊಸ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕಂಪನಿಯೊಂದನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ಎಂದು ಅವರು ಹೂಡಿಕೆದಾರರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಅವರು ಎಕ್ಸ್​ನಲ್ಲಿ "ನಾನು ಓಪನ್ಎಐ ತಂಡವನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.

ಓಪನ್ಎಐನ ಮಾಜಿ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್ಮನ್ (ಆಲ್ಟ್​ಮ್ಯಾನ್ ಅವರ ವಜಾದ ನಂತರ ಕಂಪನಿಗೆ ರಾಜೀನಾಮೆ ನೀಡಿದವರು) ಸಹ ಈ ಪ್ರಯತ್ನದಲ್ಲಿ ಕೈಜೋಡಿಸುವ ಸಾಧ್ಯತೆಯಿದೆ ಮತ್ತು ಯೋಜನೆ ಇನ್ನೂ ಅಭಿವೃದ್ಧಿ ಹಂತದಲ್ಲಿದೆ ದಿ ಇನ್ಫಾರ್ಮೇಶನ್ (The Information) ವರದಿ ಮಾಡಿದೆ.

"ಹೊಸ ಕಂಪನಿಯ ಸ್ವರೂಪ ನಿಖರವಾಗಿ ಹೇಗಿರಬಹುದು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಆದರೆ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಆಲ್ಟ್​ ಮ್ಯಾನ್ ಅವರ ವಿಶಾಲ ಮಹತ್ವಾಕಾಂಕ್ಷೆಗಳ ಬಗ್ಗೆ ಹೆಚ್ಚಿನ ವಿವರಗಳು ಹೊರಬಂದಿವೆ" ಎಂದು ವರದಿ ಶನಿವಾರ ತಡರಾತ್ರಿ ತಿಳಿಸಿದೆ. ಹೊಸ ಕಂಪನಿ ಸ್ಥಾಪಿಸುವ ನಿಟ್ಟಿನಲ್ಲಿ ಆಲ್ಟ್​ಮ್ಯಾನ್ ಅವರು ಚಿಪ್ ಡಿಸೈನರ್ ಕಂಪನಿ ಸೇರಿದಂತೆ ಸೆಮಿಕಂಡಕ್ಟರ್​ ಕಂಪನಿಗಳ ಕಾರ್ಯನಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

"ಆಲ್ಟ್​ಮ್ಯಾನ್ ಅವರ ಈ ಪ್ರಯತ್ನವು ವರ್ಷಗಳನ್ನು ತೆಗೆದುಕೊಳ್ಳಬಹುದು. ಚರ್ಚೆಗಳಲ್ಲಿ ಆಲ್ಟ್​ಮ್ಯಾನ್ ಓಪನ್ಎಐ ಅನ್ನು ಪ್ರತಿನಿಧಿಸುತ್ತಿದ್ದಾರೆಯೇ ಅಥವಾ ಪ್ರತ್ಯೇಕ ಉದ್ಯಮವನ್ನು ಪ್ರತಿನಿಧಿಸುತ್ತಿದ್ದಾರೆಯೇ ಎಂದು ತಿಳಿಯಲು ಸಾಧ್ಯವಾಗಲಿಲ್ಲ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಪಲ್​ನ ಮಾಜಿ ಚೀಫ್ ಡಿಸೈನರ್ ಜಾನಿ ಐವ್ ಮತ್ತು ಆಲ್ಟ್​ ಮ್ಯಾನ್ ಒಟ್ಟಾಗಿ ಸೇರಿಕೊಂಡು ಎಐ ಹಾರ್ಡ್​ವೇರ್ ಸಾಧನವೊಂದನ್ನು ಪ್ರಾರಂಭಿಸಲು ಯೋಚಿಸುತ್ತಿದ್ದಾರೆ ಎಂದು ಸೆಪ್ಟೆಂಬರ್​ನಲ್ಲಿ ವರದಿಗಳು ತಿಳಿಸಿದ್ದವು. ಐಫೋನ್​ನ ಪ್ರಖ್ಯಾತ ಡಿಸೈನರ್ ಆಗಿರುವ ಐವ್ ಎಐ ಹಾರ್ಡ್​ವೇರ್ ಯೋಜನೆಯ ಬಗ್ಗೆ ಆಲ್ಟ್​ಮ್ಯಾನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು ಯೋಜನೆಯ ಕುರಿತಂತೆ ಸಾಫ್ಟ್​ಬ್ಯಾಂಕ್ ಸಿಇಓ ಮತ್ತು ಹೂಡಿಕೆದಾರ ಮಸಯೋಶಿ ಸನ್ ಅವರು ಇಬ್ಬರೊಂದಿಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಓಪನ್ಎಐನ ಹಾರ್ಡ್​ವೇರ್ ತಯಾರಿಕೆಯ ಪ್ರಯತ್ನಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಓಪನ್ಎಐ ಒಂದೊಮ್ಮೆ ರೊಬೊಟಿಕ್ಸ್ ಸಂಶೋಧನಾ ವಿಭಾಗವನ್ನು ಹೊಂದಿತ್ತು. ಆದರೆ ತಾಂತ್ರಿಕ ಅಡಚಣೆಗಳನ್ನು ಎದುರಿಸಿದ ನಂತರ ಅದನ್ನು ಜುಲೈ 2021 ರಲ್ಲಿ ಬಂದ್ ಮಾಡಲಾಗಿತ್ತು.

ಇದನ್ನೂ ಓದಿ : ಫೇಸ್​ಬುಕ್, ಇನ್​ಸ್ಟಾಗಾಗಿ 2 ಹೊಸ AI ವಿಡಿಯೋ ಎಡಿಟಿಂಗ್ ಸಾಧನ ಪರಿಚಯಿಸಿದ ಮೆಟಾ

ABOUT THE AUTHOR

...view details