ಮಾಸ್ಕೋ(ರಷ್ಯಾ):ಚಾಲೆಂಜ್(Challenge)ಸಿನಿಮಾ ಚಿತ್ರೀಕರಣಕ್ಕೆಂದು ಬಾಹ್ಯಾಕಾಶಕ್ಕೆ ಹಾರಿದ್ದ ರಷ್ಯಾದ ಸಿನಿಮಾ ನಿರ್ದೇಶಕ ಕ್ಲಿಮ್ ಶಿಪೆಂಕೋ, ನಟಿ ಯೂಲಿಯಾ ಪೆರೆಸಿಲ್ಡ್ ಮತ್ತು ಓರ್ವ ಕಾಸ್ಮೋನಾಟ್ (ರಷ್ಯಾದ ಗಗನಯಾತ್ರಿ) ಒಲೆಗ್ ನೋವಿಸ್ಕಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟು ಭೂಮಿಯನ್ನು ತಲುಪಿದ್ದಾರೆ.
ಸೂಯೇಜ್ ಬಾಹ್ಯಾಕಾಶ ನೌಕೆಯಿಂದ ಹೊರಟ ಅವರು ಭೂಮಿಯ ವಾತಾವರಣ ತಲುಪುತ್ತಿದ್ದಂತೆ ಪ್ಯಾರಾಚ್ಯೂಟ್ ಮೂಲಕ ಕಜಕಿಸ್ತಾನದ ಸ್ಟೆಪ್ಪಿಸ್ ಹುಲ್ಲುಗಾವಲು ಪ್ರದೇಶದಲ್ಲಿ ಗ್ರೀನ್ ವಿಚ್ ಸಮಯ 04.35ಕ್ಕೆ (IST ಬೆಳಗ್ಗೆ 10.05) ಇಳಿದಿದ್ದಾರೆ.
ಸೂಯೆಜ್ ಎಂಎಸ್-19 ಬಾಹ್ಯಾಕಾಶ ನೌಕೆಯ ಮೂಲಕ ಸಿನಿಮಾ ಚಿತ್ರೀಕರಣಕ್ಕಾಗಿ ಅಕ್ಟೋಬರ್ 5ರಂದು ಈ ಮೂವರೂ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಬಾಹ್ಯಾಕಾಶದಲ್ಲಿ ಇದೇ ಮೊದಲ ಬಾರಿಗೆ ಚಾಲೆಂಜ್(Challenge) ಎಂಬ ಚಿತ್ರದ ಚಿತ್ರೀಕರಣ ನಡೆಸಿ, ಇವರು ವಾಪಸಾಗಿದ್ದಾರೆ.
ಸುಮಾರು 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದದಲ್ಲಿ ಚಾಲೆಂಜ್ ಸಿನಿಮಾಗಾಗಿ ಚಿತ್ರೀಕರಣ ನಡೆಸಲಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಗಗನಯಾತ್ರಿಯೊಬ್ಬರನ್ನು ರಕ್ಷಿಸುವ ಸಲುವಾಗಿ ಸರ್ಜನ್ ಒಬ್ಬರನ್ನು ಅಂತರಿಕ್ಷಕ್ಕೆ ಕಳುಹಿಸುವ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ಇತ್ತೀಚೆಗಷ್ಟೇ ಬಹಿರಂಗಪಡಿಸಲಾಗಿತ್ತು.
ಇದನ್ನೂ ಓದಿ:'ತೆಲಂಗಾಣದಿಂದ ಕಲ್ಲಿದ್ದಲು ತೆಗೆದುಕೊಂಡು ಹೋಗಲು ಕೇಂದ್ರ ಸಂಚು ರೂಪಿಸುತ್ತಿದೆ'