ವಾಷಿಂಗ್ಟನ್(ಅಮೆರಿಕ):ಏಳು ವರ್ಷಗಳ ಸತತ ಕಾರ್ಯಾಚರಣೆಯ ನಂತರ ಮೂರು ಟನ್ ತೂಕದ ಚೀನಾದ ರಾಕೆಟ್ನ ಅವಶೇಷಗಳು ಚಂದ್ರನ ಮೇಲೆ ಅಪ್ಪಳಿಸಿ, 65 ಅಡಿ ಅಗಲದ ಕುಳಿಯನ್ನು ಸೃಷ್ಟಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಜ್ಞರ ಪ್ರಕಾರ, ಶುಕ್ರವಾರದಂದು ಬೆಳಗ್ಗೆ 7.25ರ ವೇಳೆಗೆ ಚಂದ್ರನಲ್ಲಿ ರಾಕೆಟ್ ತುಣುಕು ಅಪ್ಪಳಿಸಿದೆ ಎಂದು Space.com ವರದಿ ಮಾಡಿದೆ. ಆದರೆ ನಾಸಾದ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಈ ದೃಶ್ಯವನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
ರಾಕೆಟ್ನಿಂದ ಉಂಟಾಗಿರುವ ಕುಳಿಯನ್ನು ಕಂಡುಹಿಡಿಯುವಲ್ಲಿ ಆಸಕ್ತಿ ಹೊಂದಿದ್ದೇವೆ. ಮುಂಬರುವ ದಿನಗಳಲ್ಲಿ ಆ ಕುಳಿಯನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತೇವೆ. ಒಂದು ವಾರ ಅಥವಾ ತಿಂಗಳಲ್ಲಿ ಕುಳಿಯನ್ನು ಪತ್ತೆ ಹಚ್ಚಬಹುದು ಎಂದು ನಂಬಿದ್ದೇವೆ ಎಂದು ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಮಿಷನ್‌ನ ವಿಜ್ಞಾನಿಯಾದ ಜಾನ್ ಕೆಲ್ಲರ್ ಹೇಳಿದ್ದಾರೆಂದು ದಿ ವರ್ಜ್ ವರದಿ ಮಾಡಿದೆ.
ರಾಕೆಟ್ ಅಪ್ಪಳಿಸಿದಾಗ ನಮ್ಮ ಮಿಷನ್ ಸ್ಥಳದ ಸಮೀಪದಲ್ಲಿ ಇರಲಿಲ್ಲ. ಆದ್ದರಿಂದ ನಾವು ಅದನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗಿಲ್ಲ. ಮಿಷನ್‌ನ ವಿವಿಧ ಕ್ಯಾಮೆರಾಗಳು ಕುಳಿಯನ್ನು ಪತ್ತೆಹಚ್ಚಲು ಸಾಕಷ್ಟು ರೆಸಲ್ಯೂಶನ್ ಹೊಂದಿವೆ. ಆದರೆ ಈಗಾಗಲೇ ಸಾಕಷ್ಟು ಕುಳಿಗಳನ್ನು ಚಂದ್ರ ಹೊಂದಿರುವ ಕಾರಣದ ಅದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.