ಕರ್ನಾಟಕ

karnataka

ETV Bharat / science-and-technology

ಕೇವಲ ₹1.50 ವೆಚ್ಚದಲ್ಲಿ 50 ಕಿಮೀ ಚಲಿಸುವ ಸೈಕಲ್; ರಿಚಾರ್ಜೇಬಲ್‌​ ಇ-ಬೈಕ್ ತಯಾರಿಸಿದ ವಿದ್ಯಾರ್ಥಿ

ತಮಿಳುನಾಡಿನ ಮಧುರೈನಲ್ಲಿರುವ ಅಮೆರಿಕನ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ಮ್ಯಾನುಯಲ್ ಆಗಿ ರೀಚಾರ್ಜ್ ಮಾಡಬಹುದಾದ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೂ ಮೊದಲು ಇವರು ಸೋಲಾರ್ ಸೈಕಲ್ ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದರು.

By

Published : Mar 25, 2022, 3:27 PM IST

Rechargeable e-bike and solar cycle creation by a college student
ಒಂದೂವರೆ ರೂ. ವೆಚ್ಚದಲ್ಲಿ 50 ಕಿಮೀ ಚಲಿಸುವ ಸೈಕಲ್, ರಿಚಾರ್ಜ್​ ಮಾಡುವ ಇ-ಬೈಕ್ ಕಂಡುಹಿಡಿದ ವಿದ್ಯಾರ್ಥಿ

ಮಧುರೈ(ತಮಿಳುನಾಡು):ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ನವೀಕರಿಸಲಾಗದ ಇಂಧನ ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯೂ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ದಾರಿಯಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲ.

ಈಗ ತಮಿಳುನಾಡಿನ ಮಧುರೈನಲ್ಲಿರುವ ಅಮೆರಿಕನ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ಮ್ಯಾನುಯಲ್ ಆಗಿ ರೀಚಾರ್ಜ್ ಮಾಡಬಹುದಾದ ಎಲೆಕ್ಟ್ರಿಕ್ ಬೈಕ್ (E-Bike) ತಯಾರಿಸಿದ್ದಾರೆ. ಭೌತಶಾಸ್ತ್ರದ ಸ್ನಾತಕೋತ್ತರದ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ಧನುಷ್‌ಕುಮಾರ್ ಈ ಸಾಧನೆ ಮಾಡಿದ್ದಾರೆ. ಮ್ಯಾನುಯಲ್ ಆಗಿ ಈ ಬೈಕ್ ಅನ್ನು ರೀಚಾರ್ಜ್ ಮಾಡಬಹುದು.

ಇದೇ ವಿದ್ಯಾರ್ಥಿ ಕೆಲವು ತಿಂಗಳ ಹಿಂದಷ್ಟೇ ಸೌರಶಕ್ತಿ ಚಾಲಿತ ಬೈಸಿಕಲ್ ಅಭಿವೃದ್ಧಿಪಡಿಸಿ, ನಿಬ್ಬೆರಗಾಗುವಂತೆ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಧನುಷ್ ಕುಮಾರ್, ಈಗ ಅಭಿವೃದ್ಧಿಪಡಿಸಿರುವ ಇ-ಬೈಕ್ ಸೋಲಾರ್​ ಬೈಕ್​ಗಿಂತ ಮೂರು ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.


ಪೆಡ್ನಿಂಗ್ ಮಾಡಿದರೆ ಫುಲ್ ಚಾರ್ಜ್: ಇ-ಬೈಕ್​ನಲ್ಲಿ ಕಾರುಗಳಿಗೆ ಬಳಸುವ 'ಆಲ್ಟರ್ನೇಟರ್' ಬಳಸಿದ್ದೇನೆ. ಇದು ಪೆಡ್ಲಿಂಗ್ ಚೈನ್​ನೊಂದಿಗೆ ಸಂಪರ್ಕ ಹೊಂದಿರುತ್ತದೆ. ಚಾರ್ಜ್ ಮುಗಿದಾಗ ನಾವು ಪೆಡ್ಲಿಂಗ್‌ ಮಾಡಿದರೆ, ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸರಾಸರಿ 40 ಕಿಲೋ ಮೀಟರ್​ ದೂರದವರೆಗೆ ಚಲಿಸಬಹುದು. ಈ ಇ-ಬೈಕ್ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.

ತಾಯಿಯ ಒಡವೆ ಮಾರಾಟ: ಬ್ಯಾಟರಿಯಲ್ಲಿ ಚಾರ್ಜ್ ಕಡಿಮೆಯಾದರೆ ಕೇವಲ ಒಂದು ಗಂಟೆಯಲ್ಲಿ ಪೆಡ್ಲಿಂಗ್‌ ಮೂಲಕ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ. ಕೇವಲ ಬ್ಯಾಟರಿ ಪವರ್ ಮಾತ್ರವಲ್ಲ, 'ಆಲ್ಟರ್ನೇಟರ್' ಕೂಡ ಪ್ರಯಾಣಕ್ಕೆ ಸಹಾಯ ಮಾಡುತ್ತದೆ. ಸೋಲಾರ್ ಫಲಕ ಅಳವಡಿಕೆಗೆ ಹೆಚ್ಚಿನ ಜಾಗದ ಅವಶ್ಯಕತೆ ಇದೆ. ಆದರೆ 'ಇ-ಬೈಕ್'ನಲ್ಲಿ ಅಂತಹ ಸ್ಥಳದ ಅಗತ್ಯವಿಲ್ಲ. ಈ 'ಇ-ಬೈಕ್' ಪರಿಸರ ಸ್ನೇಹಿ ಮಾತ್ರವಲ್ಲದೆ, ಆರೋಗ್ಯಕರವೂ ಆಗಿದೆ ಅನ್ನೋದು ಧನುಷ್ ವಿವರಣೆ. ಇ-ಬೈಕ್ ಅನ್ನು ಮಾರುಕಟ್ಟಗೆ ತರಲು ಧನುಷ್‌ಕುಮಾರ್ ಕೊಯಮತ್ತೂರಿನ ಖಾಸಗಿ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ತಾಯಿಯ ಒಡವೆಗಳನ್ನು ಮಾರಿ ಅಧ್ಯಯನ ನಡೆಸಿದ್ದೇನೆ ಎಂದರು.

ತಂಗಿಯ ಸೈಕಲ್​ ಬಳಕೆ:ಈ ಮೊದಲು ಧನುಷ್ ಕುಮಾರ್ ಸೌರಶಕ್ತಿ ಚಾಲಿತ ಬೈಕ್ ಅಭಿವೃದ್ಧಿಪಡಿಸಿದ್ದರು. ಬೈಸಿಕಲ್ ಕ್ಯಾರಿಯರ್‌ನಲ್ಲಿ ಬ್ಯಾಟರಿಯನ್ನು ಅಳವಡಿಸಿ, ಅದರ ಮುಂಭಾಗದಲ್ಲಿ ಸೌರಫಲಕವನ್ನು ಅಳವಡಿಸಲಾಗಿತ್ತು. ಬ್ಯಾಟರಿ ಚಾರ್ಜ್ ಮಾಡಿದರೆ, ಸೈಕಲ್ ಸುಮಾರು 50 ಕಿಲೋಮೀಟರ್​ ದೂರದವರೆಗೆ ನಿಲ್ಲದೇ ಚಲಿಸಬಲ್ಲದು. ತಮಿಳುನಾಡು ಸರ್ಕಾರದಿಂದ ತನ್ನ ತಂಗಿಗೆ ಸಿಕ್ಕಿದ್ದ ಸೈಕಲ್ ಅನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಧನುಷ್ ಪರಿವರ್ತಿಸಿದ್ದರು ಎಂಬುದು ವಿಶೇಷ.

ಇದನ್ನೂ ಓದಿ:ಆ್ಯಪಲ್ ಐಫೋನ್ ಮತ್ತು ಇತರ ಉತ್ಪನ್ನಗಳಿಗಾಗಿ ಹಾರ್ಡ್‌ವೇರ್ ಚಂದಾದಾರಿಕೆ ಸೇವೆಯಲ್ಲಿ ಕಾರ್ಯ

ಪೆಟ್ರೋಲ್‌ ವಾಹನಗಳಿಗೆ ಹೋಲಿಸಿದರೆ ಸೋಲಾರ್​ ಬ್ಯಾಟರಿಯಿಂದ ಬಳಕೆಯಾಗುವ ವಿದ್ಯುತ್ತಿನ ವೆಚ್ಚ ತುಂಬಾ ಕಡಿಮೆ ಎನ್ನುತ್ತಾರೆ ಧನುಷ್. ಕೇವಲ ಒಂದೂವರೆ ರೂಪಾಯಿಯಲ್ಲಿ 50 ಕಿಲೋಮೀಟರ್ ಅನ್ನು ಈ ಬೈಸಿಕಲ್ ಮೂಲಕ ತಲುಪಬಹುದು. ನಗರ ಪ್ರದೇಶಗಳಲ್ಲಿ ಒಂದೆಡೆಯಿಂದ ಮತ್ತೊಂದೆಡೆ ತಲುಪಲು ಬೈಸಿಕಲ್ ಹೆಚ್ಚು ಉಪಯೋಗಕ್ಕೆ ಬರುತ್ತದೆ ಎಂದು ಧನುಷ್ ಹೇಳಿದ್ದರು.

ABOUT THE AUTHOR

...view details