ಮೀನಿನ ಹೆಜ್ಜೆ ಹುಡುಕೋಕೆ ಆಗಲ್ಲ ಎಂಬ ಗಾದೆ ಮಾತಿದೆ. ಮೀನಿನ ಹೆಜ್ಜೆ ಹುಡುಕೋಕೆ ಸಾಧ್ಯವಿಲ್ಲ. ಏಕೆಂದರೆ ಮೀನುಗಳು ನಡೆದಾಡೋದೇ ಇಲ್ಲ ಎಂಬ ಉತ್ತರ ಬಂದರೂ ಬರಬಹುದು. ಆದರೆ, ಇಲ್ಲೊಂದು ಮೀನು ನಡೆದಾಡುತ್ತಿದೆ. ಸುಮಾರು 22 ವರ್ಷಗಳ ನಂತರ ಇಂತಹ ಅಪರೂಪದ ಮೀನು ಪತ್ತೆಯಾಗಿದ್ದು, ಅಳಿವಿನಂಚಿನಲ್ಲಿದೆ.
ಹೌದು, ಆಸ್ಟ್ರೇಲಿಯಾದ ರಾಜ್ಯವಾದ ತಾಸ್ಮೇನಿಯಾದ ನೈರುತ್ಯಕ್ಕಿರುವ ಕರಾವಳಿಯಲ್ಲಿ ಈ ಮೀನು ಪತ್ತೆಯಾಗಿದೆ. ಇದನ್ನು ಪಿಂಕ್ ಹ್ಯಾಂಡ್ಫಿಶ್ ಎಂದು ಕರೆಯಲಾಗುತ್ತದೆ. ಸುಮಾರು 22 ವರ್ಷದ ಹಿಂದೆ ಕಾಣಿಸಿಕೊಂಡು, ನಂತರ ಮಾಯವಾಗಿದ್ದ ಈ ಮೀನು ಅಳಿವಿನಂಚಲ್ಲಿದೆ ಎಂದು ಘೋಷಿಸಲಾಗಿತ್ತು. ಆದರೆ ಈಗ ಮತ್ತೊಮ್ಮೆ ಈ ಮೀನು ಪತ್ತೆಯಾಗಿದ್ದು, ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ.
ಆ್ಯಂಗ್ಲರ್ಫಿಶ್ ಕುಟುಂಬಕ್ಕೆ ಸೇರಿದ ಈ ಪಿಂಕ್ ಹ್ಯಾಂಡ್ ಫಿಶ್ ಇದುವರೆಗೆ ಕೇವಲ ಐದು ಬಾರಿ ಕಾಣಿಕೊಂಡಿತ್ತು. ಇದು ಕೊನೆಯದಾಗಿ ಕಾಣಿಸಿಕೊಂಡಿದ್ದು, ತಾಸ್ಮೇನಿಯಾದ ರಾಜಧಾನಿ ಹೊಬಾರ್ಟ್ಆಗ್ನೇಯ ಭಾಗದ ಕರಾವಳಿ ಪ್ರದೇಶದಲ್ಲಿ. ಅದು 1999ರಲ್ಲಿ. ಇದನ್ನು ಪತ್ತೆ ಹಚ್ಚಿದ್ದು, ತಾಸ್ಮೇನಿಯಾ ವಿಶ್ವವಿದ್ಯಾಲಯದ ತಜ್ಞರು.