ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಗಳು ಹರಡುವುದನ್ನು ತಡೆಯಲು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಗೆ ಮಾಡಲಾದ ತಿದ್ದುಪಡಿಗಳು ನೆರವಾಗಲಿವೆ ಎಂದು ಕೇಂದ್ರ ಐಟಿ ಇಲಾಖೆ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಕುಂದುಕೊರತೆಗಳನ್ನು ಮೇಲ್ವಿಚಾರಣೆ ಮಾಡಲು ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ ರಚಿಸುವ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗುತ್ತಿರುವ ಸುಳ್ಳು ಮಾಹಿತಿಯನ್ನು ನಿಯಂತ್ರಿಸುವ ಕುರಿತಾಗಿ ದೇಶದ ಲಕ್ಷಾಂತರ ಜನರು ಆಯಾ ಕಂಪನಿಗೆ ದೂರು ನೀಡಿದಾಗ್ಯೂ ಕ್ರಮ ವಹಿಸದ ಕಾರಣ, ಇದರ ಮೇಲೆ ಕಣ್ಣಿಡಲು ಸರ್ಕಾರವೇ ಮೂವರು ಸದಸ್ಯರ ಸಮಿತಿ ರಚಿಸಿದೆ ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮ ಕಂಪನಿಗಳು ಡಿಜಿಟಲ್ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸ ಮಾಡಬೇಕು. ಇದನ್ನು ಆಯಾ ದೇಶದ ಸರ್ಕಾರಗಳು ಬಯಸುತ್ತವೆ. ಈ ಹಿಂದೆ ನಿಯಮಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುವುದಷ್ಟೇ ಮಧ್ಯವರ್ತಿಗಳ ಕೆಲಸವಾಗಿತ್ತು. ಆದರೆ, ಅದು ಬದಲಾಗಿ ಅವರೂ ಕೂಡ ಹೆಚ್ಚಿನ ಹೊಣೆಗಾರಿಕೆ ಹೊರಬೇಕಾಗುತ್ತದೆ. ಕಾನೂನುಬಾಹಿರ ಪೋಸ್ಟ್ ಆಗದಂತೆ ಮಧ್ಯವರ್ತಿಗಳು ತಡೆಯಬೇಕು ಎಂದರು.