ಕರ್ನಾಟಕ

karnataka

ETV Bharat / science-and-technology

ಸೈಕ್ ಕ್ಷುದ್ರಗ್ರಹ ಅಧ್ಯಯನ: 6 ವರ್ಷಗಳಲ್ಲಿ 3.6 ಬಿಲಿಯನ್ ಕಿಮೀ ಪಯಣಿಸಲಿದೆ ಈ ನೌಕೆ - ಸೈಕ್ ಇದುವರೆಗೆ ಕಂಡುಹಿಡಿಯಲಾದ 16 ನೇ ಕ್ಷುದ್ರಗ್ರಹ

ಸೈಕ್ ಎಂಬ ಕ್ಷುದ್ರಗ್ರಹವನ್ನು ಅಧ್ಯಯನ ಮಾಡಲು ನಾಸಾ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.

NASA's Psyche Asteroid Mission: A 3.6 billion km journey to centre of the Earth
NASA's Psyche Asteroid Mission: A 3.6 billion km journey to centre of the Earth

By ETV Bharat Karnataka Team

Published : Oct 19, 2023, 1:53 PM IST

ಸಿಡ್ನಿ : ಸೈಕ್ ಎಂಬುದು ಗ್ರೀಕ್​ ದೇವತೆಯಾಗಿದ್ದು, ಆಕೆ ನಂತರ ಇರೋಸ್​ನನ್ನು ಮದುವೆಯಾಗುತ್ತಾಳೆ. ಇದೆಲ್ಲವೂ ಗ್ರೀಕ್ ಪುರಾಣದಲ್ಲಿ ಬರುವ ಕತೆ. ಆದರೆ, 1852ರಲ್ಲಿ ಒಂದು ರಾತ್ರಿ ತಾನು ಕಂಡು ಹಿಡಿದ ಆಕಾಶಕಾಯವೊಂದಕ್ಕೆ ಇಟಾಲಿಯನ್ ಖಗೋಳಶಾಸ್ತ್ರಜ್ಞ ಅನ್ನಿಬಾಲೆ ಡಿ ಗ್ಯಾಸ್ಪಾರಿಸ್ ಅದೇ ಹೆಸರನ್ನು ಯಾಕಿಟ್ಟರು ಎಂಬುದು ಆಶ್ಚರ್ಯದ ಸಂಗತಿ.

ಸೈಕ್ ಇದುವರೆಗೆ ಕಂಡುಹಿಡಿಯಲಾದ 16 ನೇ ಕ್ಷುದ್ರಗ್ರಹ: ಸೌರವ್ಯೂಹದಲ್ಲಿ ಕಾಣಿಸುವ ನಮಗೆ ಗೊತ್ತಿರದ ಮತ್ತು ಪದೇ ಪದೆ ಕಾಣಿಸಿಕೊಳ್ಳದ ಆಕಾಶಕಾಯಗಳನ್ನು ನಾವು ಧೂಮಕೇತುಗಳು ಎಂದು ಕರೆಯುತ್ತೇವೆ. ಮಂಗಳ ಮತ್ತು ಗುರುಗ್ರಹದ ಕಕ್ಷೆಗಳ ನಡುವಿನ ಕ್ಷುದ್ರಗ್ರಹ ಪಟ್ಟಿಯು ಕುಬ್ಜ ಗ್ರಹ ಸೆರೆಸ್ ನಿಂದ ಹಿಡಿದು ಸಣ್ಣ ಕಲ್ಲುಗಳು ಮತ್ತು ಧೂಳಿನ ಕಣಗಳವರೆಗೆ ಗಾತ್ರದಲ್ಲಿ ಲಕ್ಷಾಂತರ ಬಾಹ್ಯಾಕಾಶ ಬಂಡೆಗಳನ್ನು ಹೊಂದಿದೆ ಎಂಬುದು ಇಂದು ನಮಗೆ ತಿಳಿದಿದೆ.

ಇವೆಲ್ಲವುಗಳಲ್ಲಿ ಸೈಕ್ ಇಂದಿಗೂ ವಿಶೇಷವಾಗಿದೆ. ಸುಮಾರು 226 ಕಿ.ಮೀ ಸರಾಸರಿ ವ್ಯಾಸವನ್ನು ಹೊಂದಿರುವ ಆಲೂಗಡ್ಡೆ ಆಕಾರದ ಪ್ಲಾನೆಟಾಯ್ಡ್ ಅತಿದೊಡ್ಡ ಎಂ - ಪ್ರಕಾರದ ಕ್ಷುದ್ರಗ್ರಹವಾಗಿದ್ದು, ಭೂಮಿಯ ತಿರುಳಿನಂತೆಯೇ ಹೆಚ್ಚಾಗಿ ಕಬ್ಬಿಣ ಮತ್ತು ನಿಕ್ಕಲ್​ನಿಂದ ಮಾಡಲ್ಪಟ್ಟಿದೆ.

ಕಳೆದ ವಾರ ನಾಸಾ ಸೈಕ್ ಆಕಾಶಕಾಯದ ಅಧ್ಯಯನಕ್ಕಾಗಿ ಬಾಹ್ಯಾಕಾಶ ನೌಕೆಯೊಂದನ್ನು ಉಡಾವಣೆ ಮಾಡಿದೆ. ಈ ಮಿಷನ್ ಆರು ವರ್ಷಗಳ ಅವಧಿಯಲ್ಲಿ 3.6 ಬಿಲಿಯನ್ ಕಿಲೋಮೀಟರ್ ಪ್ರಯಾಣಿಸಲಿದೆ. ಈವರೆಗೂ ಗೊತ್ತಿರದ ಬಾಹ್ಯಾಕಾಶದ ಮಾಹಿತಿಯನ್ನು ಇದು ಸಂಗ್ರಹಿಸಲಿದೆ.

ನೈಸರ್ಗಿಕ ಪ್ರಯೋಗಾಲಯಗಳು : ಸೈಕ್ ನಂತಹ ಎಂ - ಪ್ರಕಾರದ ಕ್ಷುದ್ರಗ್ರಹಗಳು ಸೌರವ್ಯೂಹದ ಆರಂಭಿಕ ವರ್ಷಗಳಲ್ಲಿ ನಾಶವಾದ ಗ್ರಹಗಳ ಅವಶೇಷಗಳಾಗಿವೆ ಎಂದು ಭಾವಿಸಲಾಗಿದೆ. ಈ ಕ್ಷುದ್ರಗ್ರಹಗಳಲ್ಲಿ ಭಾರವಾದ ಅಂಶಗಳು (ಲೋಹಗಳಂತಹವು) ಮಧ್ಯ ಭಾಗದಲ್ಲಿ ಸ್ಥಿರಗೊಂಡರೆ, ಹಗುರವಾದ ಅಂಶಗಳು ಹೊರ ಪದರಗಳವರೆಗೆ ತೇಲುತ್ತಿದ್ದವು. ನಂತರ ಇತರ ವಸ್ತುಗಳೊಂದಿಗಿನ ಘರ್ಷಣೆಯಿಂದಾಗಿ ಹೊರಗಿನ ಪದರಗಳು ಚದುರಿಹೋದವು ಮತ್ತು ಹೆಚ್ಚಿನ ವಸ್ತುಗಳು ಬಾಹ್ಯಾಕಾಶದಲ್ಲಿ ಚಿಮ್ಮಿದವು. ಹೀಗಾಗಿ ಇವುಗಳಲ್ಲಿ ಲೋಹದಿಂದ ಸಮೃದ್ಧವಾದ ತಿರುಳು ಮಾತ್ರ ಉಳಿದುಕೊಂಡಿತು.

ಈ ಲೋಹದ ಆಕಾಶಕಾಯಗಳು ಗ್ರಹಗಳ ತಿರುಳನ್ನು ಅಧ್ಯಯನ ಮಾಡಲು ಪರಿಪೂರ್ಣ ನೈಸರ್ಗಿಕ ಪ್ರಯೋಗಾಲಯಗಳಾಗಿವೆ. ಭೂಮಿಯ ತಿರುಳನ್ನು ಅಧ್ಯಯನ ಮಾಡುವ ನಮ್ಮ ಪ್ರಸ್ತುತ ವಿಧಾನಗಳು ಸಾಕಷ್ಟು ಪರೋಕ್ಷವಾಗಿವೆ. ನಾವು ಕೆಲವೊಮ್ಮೆ ಸೌರವ್ಯೂಹದ ಆರಂಭಿಕ ಇತಿಹಾಸದ ಬಗ್ಗೆ ಸಣ್ಣ ಸಾಕ್ಷಿಗಳನ್ನು ಪಡೆಯುತ್ತೇವೆ ಮತ್ತು ಲೋಹದ ಉಲ್ಕಾಶಿಲೆಗಳು, ಭೂಮಿಗೆ ಬೀಳುವ ಕ್ಷುದ್ರಗ್ರಹಗಳ ಭಾಗಗಳಿಂದ ನಮ್ಮ ಸ್ವಂತ ಗ್ರಹದ ಇತಿಹಾಸವನ್ನು ತಿಳಿಯಲು ಪ್ರಯತ್ನಿಸುತ್ತೇವೆ. ಆದಾಗ್ಯೂ ನಮಗೆ ಲಭ್ಯವಿರುವ ಇಂಥ ಮಾಹಿತಿ ತುಂಬಾ ಸೀಮಿತವಾಗಿದೆ.

ಕೇಂದ್ರವನ್ನು ಅಧ್ಯಯನ ಮಾಡುವ ಮತ್ತೊಂದು ಮಾರ್ಗವೆಂದರೆ ಭೂಕಂಪಶಾಸ್ತ್ರವನ್ನು ಬಳಸುವುದು. ಭೂಕಂಪಗಳಿಂದ ಉಂಟಾಗುವ ಕಂಪನಗಳು ಗ್ರಹದ ಒಳಭಾಗದ ಮೂಲಕ ಹೇಗೆ ಚಲಿಸುತ್ತವೆ ಎಂಬುದನ್ನು ಅಧ್ಯಯನ ಮಾಡುವುದು ಈ ವಿಧಾನವಾಗಿದೆ. ವೈದ್ಯರು ನಮ್ಮ ದೇಹದ ಆಂತರಿಕ ಭಾಗಗಳನ್ನು ಅಲ್ಟ್ರಾಸೌಂಡ್ ಮೂಲಕ ಹೇಗೆ ನೋಡುತ್ತಾರೋ ಇದೂ ಅದೇ ರೀತಿಯಾಗಿದೆ. ಆದಾಗ್ಯೂ, ಭೂಮಿಯ ಮೇಲೆ ನಾವು ಸಾಗರಗಳಲ್ಲಿ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಕಡಿಮೆ ಭೂಕಂಪನ ಮಾಪಕಗಳನ್ನು ಹೊಂದಿದ್ದೇವೆ. ಹೀಗಾಗಿ ಭೂಮಿಯ ಕೇಂದ್ರ ಭಾಗದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ಅವಕಾಶಗಳು ತೀರಾ ಕಡಿಮೆಯಾಗಿವೆ.

ಇದಲ್ಲದೆ ಕೇಂದ್ರಭಾಗವು ಗ್ರಹದ ಹೊರ ಪದರಗಳ ಕೆಳಗೆ ಹೂತುಹೋಗಿದೆ. ಇದು ನಮ್ಮ ನೋಟವನ್ನು ಇನ್ನಷ್ಟು ಮರೆಮಾಡುತ್ತದೆ. ಇದು ಅಸ್ಪಷ್ಟವಾದ ಮಸೂರದ ಮೂಲಕ ದೂರದ ವಸ್ತುವನ್ನು ನೋಡಿದ ಹಾಗಾಗುತ್ತದೆ. ಭೂಕಂಪಶಾಸ್ತ್ರದ ಜೊತೆಗೆ, ಭೂಮಿಯ ಒಳಭಾಗದ ಹೆಚ್ಚಿನ ಒತ್ತಡ ಮತ್ತು ತಾಪಮಾನವನ್ನು ಮರುಸೃಷ್ಟಿಸಲು ಪ್ರಯತ್ನಿಸುವ ಪ್ರಯೋಗಾಲಯದ ಪ್ರಯೋಗಗಳ ಮೂಲಕ ನಾವು ಕೋರ್ ಬಗ್ಗೆ ತಿಳಿಯಲು ಪ್ರಯತ್ನಿಸುತ್ತೇವೆ.

ನಾವು ಭೂಕಂಪಶಾಸ್ತ್ರ ಮತ್ತು ಪ್ರಯೋಗಾಲಯದಲ್ಲಿ ನಡೆದ ಪ್ರಯೋಗಗಳ ಫಲಿತಾಂಶಗಳನ್ನು ಗ್ರಹಿಸುತ್ತೇವೆ ಮತ್ತು ಕಂಪ್ಯೂಟರ್ ಸಿಮ್ಯುಲೇಶನ್ ಗಳನ್ನು ಬಳಸಿಕೊಂಡು ಅವುಗಳನ್ನು ವಿವರಿಸಲು ಪ್ರಯತ್ನಿಸುತ್ತೇವೆ. ನೇಚರ್ ಕಮ್ಯುನಿಕೇಷನ್ಸ್ ಜರ್ನ್​ಲ್​ನಲ್ಲಿ ಪ್ರಕಟವಾದ ಇತ್ತೀಚಿನ ಪ್ರಬಂಧದಲ್ಲಿ, ಭೂಮಿಯ ತಿರುಳನ್ನು ಅಧ್ಯಯನ ಮಾಡುವಲ್ಲಿ ಪ್ರಸ್ತುತ ಸವಾಲುಗಳು ಮತ್ತು ಮುಂದಿನ ಮಾರ್ಗಗಳ ಬಗ್ಗೆ ತಿಳಿಸಲಾಗಿದೆ.

ಸೈಕ್ ಮಿಷನ್​ನ ಉದ್ದೇಶವೇನು? :ನಾಸಾದ ಸೈಕ್ ಮಿಷನ್ ಅನ್ನು ಗ್ರಹದ ಕಲ್ಲಿನ ಹೊರಪದರ, ನಿಧಾನವಾಗಿ ಚಲಿಸುವ ಮ್ಯಾಂಟಲ್ ಮತ್ತು ದ್ರವದ ತಿರುಳಿನ ಮೂಲಕ ಪ್ರಯಾಣಿಸದೆ ಭೂಮಿಯ ಮಧ್ಯಭಾಗಕ್ಕೆ ಪ್ರಯಾಣ ಎಂದು ನಾವು ಭಾವಿಸಬಹುದು. ಆರಂಭದಲ್ಲಿ ಬಿಸಿ ಮತ್ತು ಕರಗಿದ ಆದರೆ ನಿಧಾನವಾಗಿ ತಣ್ಣಗಾದ ಮತ್ತು ನಮ್ಮ ಗ್ರಹದ ಕೇಂದ್ರ ಭಾಗದಂತೆ ಗಟ್ಟಿಯಾದ ನಾಶವಾದ ಗ್ರಹದ ಕೇಂದ್ರಬಿಂದು ನಿಜವಾಗಿಯೂ ಇದೆಯೇ ಎಂದು ಕಂಡುಹಿಡಿಯುವ ಗುರಿಯನ್ನು ಈ ಮಿಷನ್ ಹೊಂದಿದೆ. ಮತ್ತೊಂದೆಡೆ, ಸೈಕ್ ಎಂದಿಗೂ ಕರಗದ ವಸ್ತುವಿನಿಂದ ಮಾಡಲ್ಪಟ್ಟಿರುವ ಸಾಧ್ಯತೆಯಿದೆ.

ಸೈಕ್ ನ ಮೇಲ್ಮೈ ಎಷ್ಟು ಹಳೆಯದು ಎಂಬುದನ್ನು ಕಂಡುಹಿಡಿಯುವುದು ನಾಸಾದ ಉದ್ದೇಶವಾಗಿದೆ. ಈ ಮಿಷನ್ ಕ್ಷುದ್ರಗ್ರಹದ ರಾಸಾಯನಿಕ ಸಂಯೋಜನೆಯನ್ನು ಸಹ ಪರೀಕ್ಷೆ ಮಾಡಲಿದೆ. ಅಂದರೆ ಗ್ರಹದ ಪದರುಗಳಲ್ಲಿ ಕಬ್ಬಿಣ ಮತ್ತು ನಿಕ್ಕಲ್ ಜೊತೆಗೆ ಆಮ್ಲಜನಕ, ಹೈಡ್ರೋಜನ್, ಇಂಗಾಲ, ಸಿಲಿಕಾನ್ ಮತ್ತು ಗಂಧಕದಂತಹ ಹಗುರವಾದ ಅಂಶಗಳು ಇವೆಯೇ ಎಂಬುದನ್ನು ಇದು ಪರೀಕ್ಷೆ ಮಾಡಲಿದೆ. ಇವುಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯು ನಮ್ಮ ಸ್ವಂತ ಗ್ರಹದ ವಿಕಾಸದ ಬಗ್ಗೆ ಸುಳಿವುಗಳನ್ನು ನೀಡಬಹುದು.

ಇದನ್ನೂ ಓದಿ : ವರ್ಕ್ ಫ್ರಮ್ ಹೋಂ ಎನ್ನುವುದು ಅವಾಸ್ತವಿಕ ಪರಿಕಲ್ಪನೆ.. ನೈತಿಕವಾಗಿ ಸರಿಯೂ ಅಲ್ಲ; ಎಲೋನ್ ಮಸ್ಕ್

ABOUT THE AUTHOR

...view details