ನವದೆಹಲಿ:ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಸ್ಪಾಟಿಫೈ 'ಡೇಲಿಸ್ಟ್' ಎಂಬ ಹೊಸ ರೀತಿಯ ಪ್ಲೇ ಲಿಸ್ಟ್ ವೈಶಿಷ್ಟ್ಯವೊಂದನ್ನು ಮಂಗಳವಾರ ಬಿಡುಗಡೆ ಮಾಡಿದೆ. ಬಳಕೆದಾರರ ಮನಸ್ಥಿತಿ ಅಥವಾ ಭಾವನೆಗಳಿಗೆ ತಕ್ಕಂತೆ ಬದಲಾಗುವುದು ಈ ಪ್ಲೇ ಲಿಸ್ಟ್ನ ವಿಶೇಷತೆಯಾಗಿದೆ. ಬಳಕೆದಾರರ ಹಿಂದಿನ ಆಲಿಸುವ ಅಭ್ಯಾಸದ ಆಧಾರದ ಮೇಲೆ ದಿನವಿಡೀ ಡೇಲಿಸ್ಟ್ ನವೀಕರಣಗೊಳ್ಳುತ್ತಿರುತ್ತದೆ. ಡೇಲಿಸ್ಟ್ ಟೂಲ್ ಅಮೆರಿಕ, ಕೆನಡಾ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಐರ್ಲೆಂಡ್ನಾದ್ಯಂತ ಉಚಿತ ಮತ್ತು ಪ್ರೀಮಿಯಂ ಬಳಕೆದಾರರಿಗೆ ಲಭ್ಯವಿದೆ.
"ಸ್ಪಾಟಿಫೈನಲ್ಲಿನ ಈ ಹೊಸ ರೀತಿಯ ಪ್ಲೇ ಲಿಸ್ಟ್ ವಿಶಿಷ್ಟ ಕಂಪನಗಳೊಂದಿಗೆ ಹರಿಯುತ್ತದೆ ಮತ್ತು ದಿನದ ನಿರ್ದಿಷ್ಟ ಕ್ಷಣಗಳಲ್ಲಿ ಅಥವಾ ವಾರದ ನಿರ್ದಿಷ್ಟ ದಿನಗಳಲ್ಲಿ ನೀವು ಸಾಮಾನ್ಯವಾಗಿ ಕೇಳುವ ಪ್ರಮುಖ ಸಂಗೀತ ಮತ್ತು ಮೈಕ್ರೋಜೆನರ್ಗಳನ್ನು ಒಟ್ಟುಗೂಡಿಸುತ್ತದೆ. ಇದು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಆಗಾಗ್ಗೆ ನವೀಕರಣಗೊಳ್ಳುತ್ತದೆ" ಎಂದು ಸ್ಪಾಟಿಫೈ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಇದಲ್ಲದೇ ಪ್ರತಿಬಾರಿ ಡೇ ಲಿಸ್ಟ್ ಅಪ್ಡೇಟ್ ಆದಾಗ ಬಳಕೆದಾರರಿಗೆ ಹೊಸ ಟ್ರ್ಯಾಕ್ಗಳು ಕಾಣಿಸುತ್ತವೆ. ಅಲ್ಲದೇ ಬಳಕೆದಾರರ ಮೂಡ್ ಆಧರಿಸಿ ಡೇ ಲಿಸ್ಟ್ಗೆ ಟೈಟಲ್ ಕಾಣಿಸಿಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. "ಥ್ರಿಲ್ ವೇವ್, ಹ್ಯಾಪಿ ಡ್ಯಾನ್ಸ್, ಪಂಪ್ಕಿನ್ ಸ್ಪೈಸ್ ಮತ್ತು ಇನ್ನೂ ಹಲವಾರು ರೀತಿಯ ಶೀರ್ಷಿಕೆಗಳೊಂದಿಗೆ ಸಂಗೀತದಲ್ಲಿ ನಿಮ್ಮ ಅಭಿರುಚಿಯ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಪ್ಲೇ ಲಿಸ್ಟ್ ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಅನನ್ಯ ಆಡಿಯೊ ಐಡೆಂಟಿಟಿ ವ್ಯಕ್ತಪಡಿಸುತ್ತದೆ" ಎಂದು ಸ್ಪಾಟಿಫೈ ತಿಳಿಸಿದೆ.
ಬಳಕೆದಾರರು ಮೇಡ್ ಫಾರ್ ಯು ಹಬ್ನಲ್ಲಿ ತಮ್ಮ ಮೊಬೈಲ್ನಲ್ಲಿ ಡೇಲಿಸ್ಟ್ ಅನ್ನು ನೋಡಬಹುದು. ಡೆಸ್ಕ್ ಟಾಪ್ ಮತ್ತು ವೆಬ್ ನಲ್ಲಿ 'ಡೇಲಿಸ್ಟ್' ಅನ್ನು ಸರ್ಚ್ ಮಾಡುವ ಮೂಲಕ ತಮ್ಮ ಪ್ಲೇ ಲಿಸ್ಟ್ ನೋಡಬಹುದು. ಏತನ್ಮಧ್ಯೆ ತನ್ನ ಪಾವತಿಸಿದ ಸೇವೆಗಳಿಗೆ ಹೆಚ್ಚಿನ ಬಳಕೆದಾರರನ್ನು ಸೈನ್ ಅಪ್ ಮಾಡಲು ಆಕರ್ಷಿಸುವ ಪ್ರಯತ್ನವಾಗಿ ಸ್ಪಾಟಿಫೈ ಇನ್-ಅಪ್ಲಿಕೇಶನ್ ಲಿರಿಕ್ಸ್ ಅನ್ನು ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಸೀಮಿತಗೊಳಿಸಲು ಪರೀಕ್ಷಿಸುತ್ತಿದೆ. ಪ್ಲೇಯಿಂಗ್ ಹಾಡಿನ ಅಡಿ ಪಾಪ್ ಅಪ್ ಆಗುವ ಇನ್-ಅಪ್ಲಿಕೇಶನ್ ಲಿರಿಕ್ಸ್ ಅನ್ನು ಪೇವಾಲ್ ಅಡಿ ಲಾಕ್ ಮಾಡಲಾಗಿದೆ ಎಂದು ಹಲವಾರು ಸ್ಪಾಟಿಫೈ ಬಳಕೆದಾರರು ಹೇಳಿದ್ದಾರೆ.
ಸ್ಪಾಟಿಫೈ ಎಂಬುದು ಡಿಜಿಟಲ್ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯಾಗಿದೆ. ಇದು ಸಂಗೀತ ಮತ್ತು ಪಾಡ್ಕಾಸ್ಟ್ಗಳ ವಿಶಾಲವಾದ ಆನ್ಲೈನ್ ಲೈಬ್ರರಿಯನ್ನು ಹೊಂದಿದೆ. ಯಾವುದೇ ಸಮಯದಲ್ಲಿ ನಿಮ್ಮ ಆಯ್ಕೆಯ ಯಾವುದೇ ವಿಷಯವನ್ನು ಕೇಳಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಕಾನೂನುಬದ್ಧವಾಗಿದ್ದು, ಬಳಸಲು ಕೂಡ ಸುಲಭವಾಗಿದೆ.
ವಿವಿಧ ಪ್ರಕಾರಗಳು ಮತ್ತು ಕಲಾವಿದರ ಲಕ್ಷಾಂತರ ಹಾಡುಗಳನ್ನು ನೀವು ಇದರಲ್ಲಿ ಕೇಳಬಹುದು. ಹಳೆಯ ಇಂಡಿ ರಾಕ್ನಿಂದ ಹಿಡಿದು ಟಾಪ್ 40 ಪಾಪ್ ವರೆಗೆ, ಚಲನಚಿತ್ರ ಹಾಡುಗಳಿಂದ ಹಿಡಿದು ಶಾಸ್ತ್ರೀಯ ಸಂಗೀತದವರೆಗೆ ಹೀಗೆ ಇದರಲ್ಲಿ ಸಂಗೀತದ ಭಂಡಾರವೇ ಇದೆ. ನಿಮ್ಮ ಆಲಿಸುವ ಇತಿಹಾಸದ ಆಧಾರದ ಮೇಲೆ ಸಂಗೀತವನ್ನು ಶಿಫಾರಸು ಮಾಡಲು ಇದು ಸಂಕೀರ್ಣ ಕ್ರಮಾವಳಿಯನ್ನು ಸಹ ಹೊಂದಿದೆ. ಜೊತೆಗೆ ಕ್ಯುರೇಟೆಡ್ ಪ್ಲೇಲಿಸ್ಟ್ಗಳು ಮತ್ತು ಇಂಟರ್ನೆಟ್ ರೇಡಿಯೋ ಸ್ಟೇಷನ್ಗಳು ಕೂಡ ಇದರಲ್ಲಿ ಸ್ಟ್ರೀಮ್ ಆಗುತ್ತವೆ.
ಇದನ್ನೂ ಓದಿ : ಕರಗಲಿವೆ ಹಿಮನದಿಗಳು, ಏರಿಕೆಯಾಗಲಿದೆ ಸಮುದ್ರ ಮಟ್ಟ: ವಿಶ್ವಕ್ಕೆ ವಿಜ್ಞಾನಿಗಳ ಎಚ್ಚರಿಕೆ!