ನವದೆಹಲಿ: 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಫಿಜರ್ ಬೈವೆಲೆಂಟ್ ಎಂಆರ್‌ಎನ್‌ಎ ಲಸಿಕೆ ಬೂಸ್ಟರ್ ಡೋಸ್ ನೀಡಿದಲ್ಲಿ ಅವರು ಕೋವಿಡ್ ಸಂಬಂಧಿತ ಅನಾರೋಗ್ಯಕ್ಕಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯು ಶೇಕಡಾ 72 ರಷ್ಟು ಕಡಿಮೆಯಾಗುತ್ತದೆ. ಕೋವಿಡ್ ಸಂಬಂಧಿತ ಸಾವಿನ ಅಪಾಯವು ಶೇ 68 ರಷ್ಟು ಕಡಿಮೆಯಾಗುತ್ತದೆ ಎಂದು The Lancet Infectious Diseases ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ವರದಿ ಹೇಳಿದೆ.
ಬೈವೆಲೆಂಟ್ ಎಮ್‌ಆರ್‌ಎನ್‌ಎ ಲಸಿಕೆಗಳು ಮೂಲ ವೈಲ್ಡ್ ಟೈಪ್ ಕೋವಿಡ್ ಸ್ಟ್ರೈನ್ ಮತ್ತು ಓಮಿಕ್ರಾನ್ ಸ್ಟ್ರೈನ್‌ನಿಂದ ನವೀಕರಿಸಿದ ಘಟಕ ಎರಡರ ಅಂಶಗಳನ್ನು ಒಳಗೊಂಡಿದ್ದು, ಓಮಿಕ್ರಾನ್ ರೂಪಾಂತರ ಮತ್ತು ನಂತರದ ಉಪವಿಭಾಗಗಳ ವಿರುದ್ಧ ಲಸಿಕೆ ಪ್ರೇರಿತ ಪ್ರತಿರಕ್ಷೆಯನ್ನು ಸುಧಾರಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಲಸಿಕೆಗಳನ್ನು ಸೆಪ್ಟೆಂಬರ್ 2022 ರಿಂದ ಅಮೆರಿಕ, ಇಸ್ರೇಲ್ ಮತ್ತು ಇತರ ದೇಶಗಳಲ್ಲಿ ಹಳೆಯ ಶೈಲಿಯ ಮೊನೊವೆಲೆಂಟ್ ಬೂಸ್ಟರ್‌ಗಳ ಬದಲಿಗೆ ಬಳಸಲಾಗುತ್ತಿದೆ.
ನಮ್ಮ ಸಂಶೋಧನೆಗಳು SARS-CoV-2 ನ ವಿಭಿನ್ನ ರೂಪಾಂತರಗಳನ್ನು ಒಳಗೊಂಡಿರುವ ಹೊಸ ರೀತಿಯ ಲಸಿಕೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ. ಹೊಸ ಲಸಿಕೆಯು ವ್ಯಾಪಕವಾದ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ ಮತ್ತು ತೀವ್ರ ಪರಿಣಾಮಗಳ ವಿರುದ್ಧ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತದೆ ಎಂದು ಅಧ್ಯಯನದ ಸಹ-ಲೇಖಕ ರೋನೆನ್ ಅರ್ಬೆಲ್ ವಿವರಿಸಿದರು. ರೋನೆನ್ ಅರ್ಬೆಲ್ ಇಸ್ರೇಲ್ನ ಟೆಲ್ ಅವೀವ್ನಲ್ಲಿರುವ ಕಮ್ಯೂನಿಟಿ ಮೆಡಿಕಲ್ ಸರ್ವಿಸ್ ಡಿವಿಜನ್, ಕ್ಲಾಲಿಟ್ ಹೆಲ್ತ್ ಸರ್ವಿಸಸ್ ನಲ್ಲಿ ಸಂಶೋಧಕರಾಗಿದ್ದಾರೆ.
ತೀವ್ರವಾದ ಕೋವಿಡ್-19 ನಿಂದ ಹೆಚ್ಚಿನ ಅಪಾಯವಿರುವ ಜನರಿಗೆ ಬೈವೆಲೆಂಟ್ mRNA ಬೂಸ್ಟರ್ ಲಸಿಕೆಗಳನ್ನು ನೀಡಲು ಇಸ್ರೇಲ್ ಆದ್ಯತೆ ನೀಡಿದೆ. ಪ್ರಾಥಮಿಕವಾಗಿ 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಇದನ್ನು ಆದ್ಯತೆಯ ಮೇರೆಗೆ ನೀಡಲಾಗುತ್ತಿದೆ. ಈ ಮೂಲಕ ಬೈವೆಲೆಂಟ್ ಲಸಿಕೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಸಂಶೋಧಕರು ಹಿಂದಿನ ಸಮನ್ವಯ ಅಧ್ಯಯನ ನಡೆಸಲು ಸಹಕಾರಿಯಾಗಿದೆ. ಸಂಶೋಧನೆಯಲ್ಲಿ ಭಾಗವಹಿಸಲು ಸೆಪ್ಟೆಂಬರ್ 27, 2022 ಮತ್ತು ಜನವರಿ 25, 2023 ರ ನಡುವೆ 5,69,519 ಅರ್ಹ ಜನರನ್ನು ಗುರುತಿಸಲಾಗಿದೆ. ಅವರಲ್ಲಿ 1,34,215 (ಶೇ 24) ಭಾಗವಹಿಸುವವರು ಅಧ್ಯಯನದ ಅವಧಿಯಲ್ಲಿ ಬೈವೆಲೆಂಟ್ mRNA ಬೂಸ್ಟರ್ ಲಸಿಕೆಯನ್ನು ಪಡೆದಿದ್ದರು.
ಕೋವಿಡ್-19 ಕಾರಣದಿಂದ ಆಸ್ಪತ್ರೆಗೆ ದಾಖಲಾದವರ ಪೈಕಿ ಬೈವೆಲೆಂಟ್ ಎಮ್‌ಆರ್‌ಎನ್‌ಎ ಬೂಸ್ಟರ್ ಲಸಿಕೆಯನ್ನು ಪಡೆದ 32 ಜನ ಹಾಗೂ 541 ಬೈವೆಲೆಂಟ್ ಬೂಸ್ಟರ್ ಲಸಿಕೆ ಪಡೆಯದವರು ಇದ್ದರು. ಅಂದರೆ ಬೈವೆಲೆಂಟ್ ಬೂಸ್ಟರ್ ಪಡೆದರೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇಕಡಾ 72 ರಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಬೈವೇಲೆಂಟ್ mRNA ಬೂಸ್ಟರ್ ವ್ಯಾಕ್ಸಿನೇಷನ್ ಕೋವಿಡ್-19 ನಿಂದ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿ ಮತ್ತು ಅಗತ್ಯ ಸಾಧನವಾಗಿದೆ. ತೀವ್ರವಾದ ಕೋವಿಡ್-19 ಅನ್ನು ತಪ್ಪಿಸಲು ವ್ಯಾಕ್ಸಿನೇಷನ್ ಪ್ರಾಥಮಿಕ ಸಾಧನವಾಗಿದೆ ಎಂದು ಅರ್ಬೆಲ್ ಹೇಳಿದರು. ಫಿಜರ್ ಬೈವೆಲೆಂಟ್ ಲಸಿಕೆಯನ್ನು ಪರೀಕ್ಷೆ ಮಾಡಿದ ಮೊದಲ ಅಧ್ಯಯನ ಇದಾಗಿದೆ ಎಂದು ತಂಡ ಹೇಳಿಕೊಂಡಿದೆ.
ಇದನ್ನೂ ಓದಿ :10 ಸಾವಿರ ಅಕ್ಷರದ ಟ್ವೀಟ್ ಸೌಲಭ್ಯ ಜಾರಿ: ಇದು ಪೇಡ್ ಬ್ಲೂ ಟಿಕ್ಗೆ ಮಾತ್ರ