ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -3 ಬಾಹ್ಯಾಕಾಶ ನೌಕೆಯನ್ನು ಹೊಂದಿರುವ ಪೇಲೋಡ್ ಫೇರಿಂಗ್ ಅನ್ನು ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ ಮಾರ್ಕ್ III (GSLV Mk-III) ನೊಂದಿಗೆ ಜೋಡಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಅತ್ಯಂತ ಭಾರವಾದ ರಾಕೆಟ್‌ನೊಂದಿಗೆ ಪೇಲೋಡ್ ಫೇರಿಂಗ್ ಅನ್ನು ಜೋಡಣೆ ಮಾಡಲಾಯಿತು. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನ ಭೂವಿಜ್ಞಾನವನ್ನು ಅನ್ವೇಷಿಸಲು ಚಂದ್ರಯಾನ-3 ಮಿಷನ್ ಜುಲೈ 13 ರಂದು ಚಂದ್ರನತ್ತ ಉಡಾವಣೆಯಾಗಲಿದೆ.
ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ 3900 ಕಿಲೋಗ್ರಾಂಗಳಷ್ಟು ಬಾಹ್ಯಾಕಾಶ ನೌಕೆಯನ್ನು ಮೊದಲು ರಾಕೆಟ್‌ನ ಪೇಲೋಡ್ ಫೇರಿಂಗ್‌ನಲ್ಲಿ ಅಳವಡಿಸಲಾಯಿತು. ನಂತರ ಅದನ್ನು ಭೂಮಿಯ ಕಕ್ಷೆಯ ಹೊರಗೆ ತಳ್ಳುವ ರಾಕೆಟ್‌ನಲ್ಲಿ ಸಂಯೋಜಿಸಲು ಸ್ಥಳಾಂತರಿಸಲಾಯಿತು. ಈ ರಾಕೆಟ್ ಭೂಮಿಯಿಂದ ಸುಮಾರು 3,84,000 ಕಿಲೋಮೀಟರ್ ದೂರದಲ್ಲಿರುವ ಚಂದ್ರನತ್ತ ಹಾರಲಿದೆ.
ಚಂದ್ರಯಾನ 3 ಮಿಷನ್ ಬಗ್ಗೆ ಇಸ್ರೋ ಅಧ್ಯಕ್ಷರು ಹೇಳಿದ್ದೇನು?:"ನಾವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿದೆ. ಜುಲೈ 13 ಮೊದಲ ಸಂಭವನೀಯ ಉಡಾವಣಾ ದಿನವಾಗಿದೆ ಮತ್ತು ಇದು 19 ರವರೆಗೆ ಮುಂದಕ್ಕೆ ಹೋಗಬಹುದು" ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಇತ್ತೀಚೆಗೆ ತಿಳಿಸಿದ್ದರು. ಜುಲೈ 12 ರಿಂದ ಜುಲೈ 19 ರ ನಡುವಿನ ಅವಧಿಯು ಉಡಾವಣೆಗೆ ಸೂಕ್ತವಾಗಿದೆ ಎಂದು ಸೋಮನಾಥ್ ಈ ಹಿಂದೆ ಹೇಳಿದ್ದರು. ಚಂದ್ರನತ್ತ ಪ್ರಯಾಣಿಸುವಾಗ ಕನಿಷ್ಠ ಇಂಧನ ಮತ್ತು ಹೆಚ್ಚಿನ ದಕ್ಷತೆಯೊಂದಿಗೆ ರಾಕೆಟ್ ಪಯಣಿಸಲು ಸೂಕ್ತವಾದ ಕಕ್ಷೆಯ ಡೈನಾಮಿಕ್ಸ್ಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಧರಿಸಲಾಗುತ್ತದೆ.
ರಾಕೆಟ್‌ನ ಮೇಲಿರುವ ಪೇಲೋಡ್ ಫೇರಿಂಗ್ ಲ್ಯಾಂಡರ್ ಅನ್ನು ಒಳಗೊಂಡಿದೆ ಮತ್ತು ರೋವರ್ ಅನ್ನು ಪ್ರೊಪಲ್ಷನ್ ಮಾಡ್ಯೂಲ್‌ನೊಂದಿಗೆ ಸಂಯೋಜಿಸಲಾಗಿದೆ. ಇದು ಬೇರ್ಪಡಿಸುವ ಮೊದಲು ಲ್ಯಾಂಡರ್ ಅನ್ನು ಚಂದ್ರನಿಂದ 100 ಕಿಲೋಮೀಟರ್ ಎತ್ತರಕ್ಕೆ ಸಾಗಿಸುತ್ತದೆ. ಲ್ಯಾಂಡರ್ ಚಂದ್ರನ ಮೇಲೆ ನಿರ್ದಿಷ್ಟ ಸ್ಥಳದಲ್ಲಿ ಸಾವಧಾನವಾಗಿ ಇಳಿಯುವ ಸಾಮರ್ಥ್ಯ ಹೊಂದಿರುತ್ತದೆ ಮತ್ತು ಅಲ್ಲಿ ರೋವರ್ ಅನ್ನು ನಿಯೋಜಿಸುತ್ತದೆ. ನಂತರ ರೋವರ್ ತನ್ನ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈನಲ್ಲಿ ರಾಸಾಯನಿಕ ವಿಶ್ಲೇಷಣೆ ಮಾಡಲಿದೆ.
ಈ ಮಿಷನ್ ಯಶಸ್ವಿಯಾದರೆ ಭಾರತ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ:ಮಿಷನ್ ಚಂದ್ರಯಾನ-2 ನಾಲ್ಕು ವರ್ಷಗಳ ಹಿಂದೆ 2019 ರಲ್ಲಿ ಚಂದ್ರನ ಮೇಲ್ಮೈಯಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿತ್ತು. ಈಗಿನ ಚಂದ್ರಯಾನ-3 ಅದರ ಮುಂದುವರಿದ ಭಾಗವಾಗಿದೆ. ಚಂದ್ರಯಾನ - 3 ಮಿಷನ್ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸಲಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ನಿಧಾನವಾಗಿ ಇಳಿಯಲು ಪ್ರಯತ್ನಿಸಲಿದೆ. ಇದು ಯಶಸ್ವಿಯಾದರೆ ಭಾರತವು ಚಂದ್ರನ ಮೇಲಿಳಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.
ಚಂದ್ರನ ಮೇಲೆ ಇಳಿಯಲು ಹಲವಾರು ರೀತಿಯಲ್ಲಿ ತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಬೇಕಾಗುತ್ತದೆ. ಅತ್ಯಂತ ನಿಖರವಾದ ನ್ಯಾವಿಗೇಷನ್ ಮಾರ್ಗದರ್ಶನ, ನಿಖರವಾದ ಫ್ಲೈಟ್ ಡೈನಾಮಿಕ್ಸ್, ಸ್ಪಷ್ಟವಾದ ಭೂಪ್ರದೇಶದ ಚಿತ್ರಣ, ಸಂಪೂರ್ಣವಾಗಿ ಸಮಯದ ಥ್ರಸ್ಟರ್ ಫೈರಿಂಗ್‌ಗಳು ಮತ್ತು ಅಂತಿಮವಾಗಿ ಸರಿಯಾದ ಲ್ಯಾಂಡಿಂಗ್ ಸ್ಥಳವನ್ನು ತಲುಪಲು ಸರಿಯಾದ ಕ್ಷಣದಲ್ಲಿ ಮತ್ತು ಸರಿಯಾದ ವೇಗದಲ್ಲಿ ನಿಧಾನಗೊಳಿಸುವ ಸಾಮರ್ಥ್ಯ ಈ ಎಲ್ಲವೂ ಚಂದ್ರನ ಮೇಲೆ ನೌಕೆಯೊಂದನ್ನು ಇಳಿಸಲು ನಿರ್ಣಾಯಕ ಅಂಶಗಳಾಗಿವೆ. ಈ ಪ್ರಕ್ರಿಯೆಗಳಲ್ಲಿ ಯಾವುದೇ ಒಂದು ತಪ್ಪಾದರೂ ಇಡೀ ಯೋಜನೆ ವಿಫಲವಾಗಬಹುದು.
ಇದನ್ನೂ ಓದಿ : WhatsApp: ಮೇ ತಿಂಗಳಲ್ಲಿ 65 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸ್ಆ್ಯಪ್