ನವದೆಹಲಿ:ತನ್ನ ಪ್ಲಾಟ್ಫಾರ್ಮ್ನಲ್ಲಿ ಪಾಸ್ವರ್ಡ್ ಬದಲಾಗಿ ಪಾಸ್ ಕೀ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ವಾಟ್ಸ್ಆ್ಯಪ್ ಘೋಷಿಸಿದೆ. ಈ ಬದಲಾವಣೆಯಿಂದ ಬಳಕೆದಾರರು ಕಿರಿಕಿರಿ ಉಂಟು ಮಾಡುವ ಹಾಗೂ ಅಸುರಕ್ಷಿತವಾದ ಟು - ಸ್ಟೆಪ್ ಎಸ್ಎಂಎಸ್ ದೃಢೀಕರಣದ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ. "ಆಂಡ್ರಾಯ್ಡ್ ಬಳಕೆದಾರರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪಾಸ್ ಕೀಗಳೊಂದಿಗೆ ಲಾಗ್ ಇನ್ ಮಾಡಬಹುದು. ನಿಮ್ಮ ಮುಖ, ಬೆರಳಚ್ಚು ಅಥವಾ ಪಿನ್ ಮಾತ್ರ ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಅನ್ಲಾಕ್ ಮಾಡುತ್ತದೆ" ಎಂದು ಕಂಪನಿ ಸೋಮವಾರ ತಡರಾತ್ರಿ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ.
ಪಾಸ್ ಕೀ ವೈಶಿಷ್ಟ್ಯವನ್ನು ಈ ಹಿಂದೆಯೇ ವಾಟ್ಸ್ಆ್ಯಪ್ ತನ್ನ ಬೀಟಾ ಚಾನೆಲ್ನಲ್ಲಿ ಪರೀಕ್ಷಿಸಿದೆ. ಹೀಗಾಗಿ ಇನ್ನು ಮುಂದೆ ಇದನ್ನು ಎಲ್ಲ ಬಳಕೆದಾರರಿಗೂ ಪರಿಚಯಿಸಲು ವಾಟ್ಸ್ಆ್ಯಪ್ ಮುಂದಾಗಿದೆ. ಆದರೆ ಐಫೋನ್ ಗಳಲ್ಲಿ ಪಾಸ್ ಕೀ ವೈಶಿಷ್ಟ್ಯ ಯಾವಾಗ ಸಿಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಆಂಡ್ರಾಯ್ಡ್ ಸಾಧನಗಳಲ್ಲಿ ಪಾಸ್ ಕೀ ವೈಶಿಷ್ಟ್ಯವು ಮುಂದಿನ ಕೆಲ ವಾರಗಳಲ್ಲಿ ಮತ್ತು ತಿಂಗಳುಗಳಲ್ಲಿ ಹೊರಬರಲಿದೆ ಎಂದು ಕಂಪನಿ ತಿಳಿಸಿದೆ. ಪಾಸ್ ಕೀಗಳು ಸಾಂಪ್ರದಾಯಿಕ ಪಾಸ್ ವರ್ಡ್ ಗಳನ್ನು ನಿಮ್ಮ ಸಾಧನದ ಸ್ವಂತ ದೃಢೀಕರಣ ವಿಧಾನಗಳೊಂದಿಗೆ ಬದಲಾಯಿಸಲಿವೆ. ಅಂದರೆ ಇನ್ನುಮುಂದೆ ಪಾಸ್ವರ್ಡ್ ಲಾಗಿನ್ ಕಣ್ಮರೆಯಾಗಲಿದೆ.