ನವದೆಹಲಿ :ಬರುವ ದಿನಗಳಲ್ಲಿ ಗೂಗಲ್ ಸೇವೆಗಳಿಗೆ ಸೈನ್ ಇನ್ ಮಾಡಲು ಪಾಸ್ವರ್ಡ್ ಬದಲಾಗಿ ಪಾಸ್ಕೀ ಬಳಕೆ ಕಡ್ಡಾಯವಾಗಲಿದೆ. ಪಾಸ್ಕೀ (ಪಾಸ್ ವರ್ಡ್ ಗಳಿಗೆ ಪರ್ಯಾಯ) ಮೂಲಕವೇ ಸೈನ್ ಇನ್ ಮಾಡುವುದು ಡೀಫಾಲ್ಟ್ ಸೈನ್ - ಇನ್ ಪ್ರಕ್ರಿಯೆ ಆಗಲಿದೆ ಎಂದು ಗೂಗಲ್ ಹೇಳಿದೆ. ಪಾಸ್ ಕೀ ಬಳಸಿ ಬಳಕೆದಾರರು ಬಯೋಮೆಟ್ರಿಕ್ ಸೆನ್ಸರ್ (ಫಿಂಗರ್ ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ), ಪಿನ್ ಅಥವಾ ಪ್ಯಾಟರ್ನ್ಗಳ ಮೂಲಕ ಅಪ್ಲಿಕೇಶನ್ ಗಳು ಮತ್ತು ವೆಬ್ ಸೈಟ್ ಗಳಿಗೆ ಸೈನ್ ಇನ್ ಮಾಡಬಹುದು. ಅಂದರೆ ಇದು ಪಾಸ್ ವರ್ಡ್ ಗಳನ್ನು ನೆನಪಿಟ್ಟುಕೊಳ್ಳುವ ಕಿರಿಕಿರಿಯನ್ನು ತಪ್ಪಿಸಲಿದೆ.
"ಇದರರ್ಥ ಮುಂದಿನ ಬಾರಿ ನೀವು ನಿಮ್ಮ ಖಾತೆಗೆ ಸೈನ್ ಇನ್ ಮಾಡುವಾಗ ಪಾಸ್ ಕೀಗಳನ್ನು ಸೃಷ್ಟಿಸುವಂತೆ ಮತ್ತು ಬಳಸುವಂತೆ ನಿಮಗೆ ನೋಟಿಫಿಕೇಶನ್ಗಳು ಕಾಣಿಸಲಿವೆ. ಇದು ಮುಂದಿನ ದಿನಗಳಲ್ಲಿ ನಿಮ್ಮ ಸೈನ್ ಇನ್ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ. ನಿಮ್ಮ ಗೂಗಲ್ ಖಾತೆ ಸೆಟ್ಟಿಂಗ್ಗಳಲ್ಲಿ 'ಸಾಧ್ಯವಾದಾಗ ಪಾಸ್ವರ್ಡ್ ಸ್ಕಿಪ್ ಮಾಡಿ' (Skip password when possible) ಎಂಬ ಆಪ್ಷನ್ ಕಾಣಿಸಲಿದೆ" ಎಂದು ಗೂಗಲ್ ಮಂಗಳವಾರ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
"ಆದರೆ ಪಾಸ್ಕೀ ವಿಧಾನವನ್ನು ಜಾರಿಗೊಳಿಸುವುದು ದೊಡ್ಡ ಪ್ರಕ್ರಿಯೆಯಾಗಿದೆ ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ಪಾಸ್ವರ್ಡ್ಗಳು ಇನ್ನೂ ಕೆಲ ಸಮಯದವರೆಗೆ ಜಾರಿಯಲ್ಲಿರುತ್ತವೆ" ಎಂದು ಅದು ಹೇಳಿದೆ. ಪಾಸ್ ವರ್ಡ್ ಗಳಲ್ಲಿರುವಂತೆ ಎಲ್ಲಾ ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳನ್ನು ನೆನಪಿಟ್ಟುಕೊಳ್ಳುವ ಕಿರಿಕಿರಿಯನ್ನು ಪಾಸ್ಕೀಗಳು ತಪ್ಪಿಸುವುದು ಇವುಗಳ ಪ್ರಮುಖ ಅನುಕೂಲವಾಗಿದೆ. ಜೊತೆಗೆ ಅವು ಫಿಶಿಂಗ್ ನಿರೋಧಕವಾಗಿವೆ ಎಂದು ಗೂಗಲ್ ತಿಳಿಸಿದೆ.
ಗೂಗಲ್ ಪ್ರಕಾರ, ಗೂಗಲ್ ಅಕೌಂಟ್ಗಳಿಗೆ ಪಾಸ್ ಕೀಗಳನ್ನು ಪರಿಚಯಿಸಿದಾಗಿನಿಂದ, ಅವನ್ನು ಬಳಸಿದ ಶೇಕಡಾ 64 ರಷ್ಟು ಬಳಕೆದಾರರು ಪಾಸ್ ವರ್ಡ್ ಗಳು ಮತ್ತು ಎರಡು - ಹಂತದ ಪರಿಶೀಲನೆಯಂತಹ ಸಾಂಪ್ರದಾಯಿಕ ವಿಧಾನಗಳಿಗಿಂತ ಪಾಸ್ ಕೀಗಳು ಬಳಸಲು ಸರಳವಾಗಿವೆ ಎಂದು ಹೇಳಿದ್ದಾರೆ. ಏತನ್ಮಧ್ಯೆ, ಸ್ಪ್ಯಾಮ್ ಮತ್ತು ಇತರ ಅನಗತ್ಯ ಇಮೇಲ್ಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಫೆಬ್ರವರಿ 2024 ರಿಂದ ಸ್ಪ್ಯಾಮ್ ಮೇಲ್ ಕಳುಹಿಸುವವರ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರುವುದಾಗಿ ಗೂಗಲ್ ಘೋಷಿಸಿದೆ.
ಇದನ್ನೂ ಓದಿ : ಭಾರತದ ಬಾಹ್ಯಾಕಾಶ ಆರ್ಥಿಕತೆಗೆ $44 ಬಿಲಿಯನ್ ತಲುಪುವ ಸಾಮರ್ಥ್ಯ; ಇನ್-ಸ್ಪೇಸ್ ಅಧ್ಯಕ್ಷ ಪವನ್ ಗೋಯೆಂಕಾ