ನವದೆಹಲಿ: ನೀವು ಬರ್ಗರ್, ಪಿಜ್ಜಾ ರೀತಿಯ ಖಾದ್ಯ ಪ್ರಿಯರಾ? ಇವುಗಳನ್ನು ನೀವು ಪೇಪರ್ ಬ್ಯಾಗ್ ಹಾಗೂ ಪೇಪರ್ ಬಾಕ್ಸ್ಗಳಲ್ಲಿ ತಿನ್ನುತ್ತೀರಾ? ನಿಮ್ಮ ಉತ್ತರ ಹೌದು ಎಂದಾದರೆ ಇನ್ನು ಮುಂದೆ ಈ ವಿಷಯದಲ್ಲಿ ಕೊಂಚ ಹುಷಾರಾಗಿರಿ. ಈ ಖಾದ್ಯಗಳನ್ನು ಇಟ್ಟು ಕೊಡುವ ಪೇಪರ್ ಬ್ಯಾಗ್‌ಗಳು ಮತ್ತು ಕಾಂಪೋಸ್ಟೇಬಲ್ ಪೇಪರ್ ಬೌಲ್‌ಗಳು ಎಂದಿಗೂ ನಾಶವಾಗದ ಹೆಚ್ಚಿನ ಪ್ರಮಾಣದ ಶಾಶ್ವತ ಕೆಮಿಕಲ್ಗಳು (forever chemicals) ಹೊಂದಿರಬಹುದು. ಇಂಥ ಶಾಶ್ವತ ಕೆಮಿಕಲ್ಗಳು ಮಾನವನ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡದ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ತಿಳಿದು ಬಂದಿದೆ.
ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ನಂತರ ಪೇಪರ್ ಬ್ಯಾಗ್‌ಗಳು ಮತ್ತು ಕಾಂಪೋಸ್ಟೆಬಲ್ ಆಹಾರದ ಕಂಟೇನರ್‌ಗಳು ಇವಕ್ಕೆ ಪರ್ಯಾಯವಾಗಿ ಬಳಕೆಗೆ ಬಂದಿವೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಎಸೆಗ್ರೀನ್ ಎಂಬ ವಸ್ತುವನ್ನು ಇತ್ತೀಚೆಗೆ ಬಳಸಲಾಗುತ್ತಿದೆ. ಈ ಎಸೆಗ್ರೀನ್ ವಸ್ತುಗಳು ಪರ್ಫ್ಲುಯೋ ಆಕ್ಟೇನ್ ಸಲ್ಫೇಟ್ ಅಥವಾ PFOS ಎಂಬ ರಾಸಾಯನಿಕವನ್ನು ಒಳಗೊಂಡಿರುತ್ತವೆ. ಇದು ಪರ್- ಮತ್ತು ಪಾಲಿಫ್ಲೋರೊಆಲ್ಕೈಲ್ ಪದಾರ್ಥಗಳು ಅಥವಾ PFAS ಎಂದು ಕರೆಯಲ್ಪಡುವ ಮಾನವ ನಿರ್ಮಿತ ರಾಸಾಯನಿಕಗಳ ವರ್ಗಗಳಲ್ಲಿ ಒಂದಾಗಿದೆ. PFAS ಅನ್ನು ಸಾಮಾನ್ಯವಾಗಿ ಕಾಗದವನ್ನು ಗ್ರೀಸ್ ಅಥವಾ ಎಣ್ಣೆಯ ರೆಸಿಸ್ಟೆಂಟ್ ಮಾಡಲು ಬಳಸಲಾಗುತ್ತದೆ. ಹೀಗಾಗಿ ಅವುಗಳನ್ನು ಅನೇಕ ಫಾಸ್ಟ್ ಫುಡ್ ಕಂಟೇನರ್‌ಗಳು ಮತ್ತು ಹೊದಿಕೆಗಳಲ್ಲಿ ಬಳಸಲಾಗುತ್ತದೆ.
ಶಾಶ್ವತ ರಾಸಾಯನಿಕಗಳು ಎಂದರೇನು?:ಈ ರಾಸಾಯನಿಕಗಳನ್ನು ಶಾಶ್ವತ ರಾಸಾಯನಿಕಗಳು ಎಂದೂ ಕರೆಯುತ್ತಾರೆ. ಅವು ಬಹಳ ನಿಧಾನವಾಗಿ ಒಡೆಯುತ್ತವೆ ಮತ್ತು ಯಕೃತ್ತು ಸೇರಿದಂತೆ ಪರಿಸರ ಮತ್ತು ಮಾನವ ಅಂಗಾಂಶಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇದೇ ಕಾರಣಕ್ಕೆ ಅವನ್ನು ಶಾಶ್ವತ ರಾಸಾಯನಿಕಗಳು ಎಂದು ಕರೆಯಲಾಗುತ್ತದೆ. ಕೆನಡಾ, ಅಮೆರಿಕ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಸಂಶೋಧಕರು ಟೊರೊಂಟೊದಲ್ಲಿ ಫೆಬ್ರವರಿ ಮತ್ತು ಮಾರ್ಚ್ 2020 ರ ನಡುವೆ ಸಂಗ್ರಹಿಸಲಾದ 42 ರೀತಿಯ ಪೇಪರ್ ಆಹಾರ ಪ್ಯಾಕೇಜಿಂಗ್‌ಗಳನ್ನು ಪರೀಕ್ಷಿಸಿದ್ದಾರೆ. ಇದರಲ್ಲಿ ಕಾಂಪೋಸ್ಟೇಬಲ್ ಪೇಪರ್ ಬೌಲ್‌ಗಳು, ಸ್ಯಾಂಡ್‌ವಿಚ್ ಮತ್ತು ಬರ್ಗರ್ ರ‍್ಯಾಪರ್‌ಗಳು, ಪಾಪ್‌ಕಾರ್ನ್ ಸರ್ವಿಂಗ್ ಬ್ಯಾಗ್‌ಗಳು ಮತ್ತು ಡೋನಟ್ಸ್‌ನಂತಹ ಸಿಹಿತಿಂಡಿಗಳ ಚೀಲಗಳು ಸೇರಿವೆ.