ಹೈದರಾಬಾದ್: ಒನ್ ಪ್ಲಸ್ ತನ್ನ ಮೊದಲ ಮಡಚಬಹುದಾದ ಸ್ಮಾರ್ಟ್ಫೋನ್ (foldable smartphone) ಒನ್ ಪ್ಲಸ್ ಓಪನ್ (OnePlus Open) ಅನ್ನು ಇಂದು ಸಂಜೆ 7.30 ಕ್ಕೆ ಪ್ರಾರಂಭವಾಗಲಿರುವ ಬಹುನಿರೀಕ್ಷಿತ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಿದೆ. "ಓಪನ್ ಫಾರ್ ಎವೆರಿಥಿಂಗ್" ಹೆಸರಿನ ಈವೆಂಟ್ ಅದ್ದೂರಿಯಾಗಿ ನಡೆಯಲಿದ್ದು, ಒನ್ ಪ್ಲಸ್ ತನ್ನ ಯೋಜನೆಗಳನ್ನು ಪ್ರಚುರಪಡಿಸಲಿದೆ ಹಾಗೂ ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಮಡಚಬಹುದಾದ ಸ್ಮಾರ್ಟ್ಫೋನ್ಗಳಿಗಿಂತ ತನ್ನ ಫೋನ್ ಹೇಗೆ ವಿಭಿನ್ನವಾಗಿರಲಿದೆ ಎಂಬುದನ್ನು ಪ್ರದರ್ಶಿಸಲಿದೆ.
ಫೋಲ್ಡಬಲ್ ಫೋನ್ಗಳ ಮಾರುಕಟ್ಟೆಗೆ ಒನ್ ಪ್ಲಸ್ ಪ್ರವೇಶದಿಂದ ಸಾಂಪ್ರದಾಯಿಕ ಮಾನದಂಡಗಳು ಬದಲಾಗಲಿವೆ ಮತ್ತು ಮಡಚಬಹುದಾದ ಫೋನ್ಗಳ ಮಾರುಕಟ್ಟೆಯಲ್ಲಿನ ಅಡ್ಡಿ ಆತಂಕಗಳನ್ನು ತೊಡೆದುಹಾಕಲಿದೆ ಎಂದು ಕಂಪನಿ ಹೇಳಿದೆ.
ಒನ್ ಪ್ಲಸ್ ಬಿಡುಗಡೆ ಸಮಾರಂಭದ ಲೈವ್ ಸ್ಟ್ರೀಮಿಂಗ್: ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಒಲವು ಹೊಂದಿರುವವರು ಮತ್ತು ಒನ್ ಪ್ಲಸ್ ಅಭಿಮಾನಿಗಳ ನಿರೀಕ್ಷೆಯನ್ನು ಪೂರೈಸಲು ಕಂಪನಿಯು ಇಂದು ಸಂಜೆ 7.30 ರಿಂದ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ "ಓಪನ್ ಫಾರ್ ಎವೆರಿಥಿಂಗ್" ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.
ಒನ್ಪ್ಲಸ್ ಓಪನ್ ಸ್ಪೆಸಿಫಿಕೇಶನ್ಗಳೇನು?: ಈವೆಂಟ್ ಗೆ ಸ್ವಲ್ಪ ಮುಂಚಿತವಾಗಿ, ಇಂದು ಬಿಡುಗಡೆಯಾಗಲಿರುವ ಮಡಚಬಹುದಾದ ಪೋನ್ನ ಬಗ್ಗೆ ಒಂದಿಷ್ಟು ಮಾಹಿತಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ ಒನ್ ಪ್ಲಸ್ ಓಪನ್ ಶಕ್ತಿಯುತ ಸ್ನ್ಯಾಪ್ ಡ್ರ್ಯಾಗನ್ 8 ಜೆನ್ 2 ಎಸ್ಒಸಿ ಚಿಪ್ ಹೊಂದಿದ್ದು, 16 ಜಿಬಿ ರಾಮ್ ಮತ್ತು 512 ಜಿಬಿ ಇಂಟರ್ನಲ್ ಸ್ಟೋರೇಜ್ ಇದರಲ್ಲಿದೆ. ಹೊಸ ಮಡಚಬಹುದಾದ ಸ್ಮಾರ್ಟ್ ಫೋನ್ ಬಳಕೆದಾರರಿಗೆ ವೇಗದ ಮತ್ತು ಸುಗಮ ಬಳಕೆಯ ಅನುಭವ ನೀಡಲಿದೆ ಕಂಪನಿ ಗ್ರಾಹಕರಿಗೆ ಭರವಸೆ ನೀಡಿದೆ. ಒನ್ ಪ್ಲಸ್ ಓಪನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹಾಗೂ ಇದು ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಇದು ಜೂಮ್ ಸಾಮರ್ಥ್ಯ ಹೆಚ್ಚಿಸುವ ಮತ್ತು ಅತ್ಯಂತ ಸ್ಪಷ್ಟವಾದ ಟೆಲಿಫೋಟೋ ಶಾಟ್ಗಳನ್ನು ಸೆರೆಹಿಡಿಯಲು ಹೆಸರುವಾಸಿಯಾದ ತಂತ್ರಜ್ಞಾನವಾಗಿದೆ.
ಒನ್ ಪ್ಲಸ್ ಓಪನ್ ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದ್ದು, ಅನುಕೂಲಕರ ಮತ್ತು ಸುರಕ್ಷಿತವಾದ ಅನ್ಲಾಕ್ ವಿಧಾನವನ್ನು ನೀಡುತ್ತದೆ. ಸಾಧನದ ಡಿಸ್ಪ್ಲೇ ಪಂಚ್ - ಹೋಲ್ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಿರೀಕ್ಷಿತ ವಿನ್ಯಾಸ ಮತ್ತು ಬೆಲೆ:ಇತ್ತೀಚಿನ ವರದಿಯ ಪ್ರಕಾರ, ಒನ್ ಪ್ಲಸ್ ಓಪನ್ ಸಾಧನವು ಸ್ಲೀಕ್ ಬ್ಲ್ಯಾಕ್ ಮತ್ತು ವೈಬ್ರಂಟ್ ಗ್ರೀನ್ ಬಣ್ಣದ ರೂಪಾಂತರಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಒನ್ ಪ್ಲಸ್ ಓಪನ್ ಬೆಲೆ 1,699 ಡಾಲರ್ ಅಂದರೆ ಸುಮಾರು 1,41,405 ರೂ. ಆಗಿರಲಿದೆ. ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 5 ನಂಥ ಮಡಚಬಹುದಾದ ಸ್ಮಾರ್ಟ್ಪೋನ್ಗೆ ಹೋಲಿಸಿದರೆ ಒನ್ ಪ್ಲಸ್ ಓಪನ್ ಕೊಂಚ ಅಗ್ಗವಾಗಿದೆ.
ಇದನ್ನೂ ಓದಿ : ಸೈಕ್ ಕ್ಷುದ್ರಗ್ರಹ ಅಧ್ಯಯನ: 6 ವರ್ಷಗಳಲ್ಲಿ 3.6 ಬಿಲಿಯನ್ ಕಿಮೀ ಪಯಣಿಸಲಿದೆ ಈ ನೌಕೆ