ಕರ್ನಾಟಕ

karnataka

ETV Bharat / science-and-technology

'Threads' ಬಳಕೆದಾರರ ಸಂಖ್ಯೆ ಶೇ 79ರಷ್ಟು ಕುಸಿತ: ಮತ್ತೆ ಮುಂಚೂಣಿಯಲ್ಲಿ 'X'

Threads: ಮೆಟಾ ಒಡೆತನದ ಥ್ರೆಡ್ಸ್​ ಆ್ಯಪ್ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಕುಸಿತವಾಗಿದೆ. ಸದ್ಯದ ಸ್ಥಿತಿಯಲ್ಲಿ ಎಕ್ಸ್​​ಗೆ ಪೈಪೋಟಿ ನೀಡಲು ಥ್ರೆಡ್ಸ್​ ವಿಫಲವಾಗಿದೆ ಎಂದು ಕಂಡು ಬರುತ್ತಿದೆ.

Instagram Threads' usage on Android falls
Instagram Threads' usage on Android falls

By

Published : Aug 14, 2023, 12:30 PM IST

ನವದೆಹಲಿ: ಎಲೋನ್ ಮಸ್ಕ್ ಒಡೆತನದ ಎಕ್ಸ್​​ ಆ್ಯಪ್​ ಬಳಕೆದಾರರು ಹೆಚ್ಚುತ್ತಿರುವ ಮಧ್ಯೆ ಮೆಟಾ ಒಡೆತನದ ಥ್ರೆಡ್ಸ್​ ಆ್ಯಪ್​ ಸಕ್ರಿಯ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್​ ಬರ್ಗ್ ಮತ್ತು ಎಲೋನ್​ ಮಸ್ಕ್​ ಮಧ್ಯದ​ ಕೇಜ್ ಫೈಟ್ ಡ್ರಾಮಾದ ನಡುವೆ ಇನ್​​ಸ್ಟಾಗ್ರಾಮ್ ಥ್ರೆಡ್ಸ್ ಅಪ್ಲಿಕೇಶನ್ ಆಂಡ್ರಾಯ್ಡ್​​ನಲ್ಲಿ ಶೇಕಡಾ 79 ರಷ್ಟು ದೈನಂದಿನ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿದೆ ಎಂದು ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ತಂತ್ರಜ್ಞಾನ ವಿಶ್ಲೇಷಣಾ ಸಂಸ್ಥೆ ಸಿಮಿಲರ್​ವೆಬ್ ಅಂದಾಜಿನ ಪ್ರಕಾರ, ಥ್ರೆಡ್ಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಜುಲೈ 7 ರಲ್ಲಿದ್ದಂತೆ ವಿಶ್ವಾದ್ಯಂತ 49.3 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. ಆದರೆ, ಆಗಸ್ಟ್ 7 ರಂದು ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ 10.3 ಮಿಲಿಯನ್​ಗೆ ಇಳಿದಿದೆ.

ಥ್ರೆಡ್ಸ್ ಅಪ್ಲಿಕೇಶನ್​ ಆರಂಭವಾದ ಹೊಸತರಲ್ಲಿ ವಿಶ್ವಾದ್ಯಂತ ಪ್ರತಿಯೊಬ್ಬ ಬಳಕೆದಾರ ಸರಾಸರಿಯಾಗಿ 14 ನಿಮಿಷ ಆ್ಯಪ್​​ ಬಳಕೆಗಾಗಿ ವ್ಯಯಿಸುತ್ತಿದ್ದ. ಅದರಲ್ಲೂ ಈ ಸಮಯಾವಧಿ ಅಮೆರಿಕದಲ್ಲಿ ಸಾಕಷ್ಟು ಹೆಚ್ಚಾಗಿತ್ತು. ಜುಲೈ 7ರ ಹೊತ್ತಿಗೆ ಅಮೆರಿಕದಲ್ಲಿ ಪ್ರತಿಯೊಬ್ಬ ಥ್ರೆಡ್ಸ್​​ ಬಳಕೆದಾರ ಸರಾಸರಿ 21 ನಿಮಿಷಗಳಷ್ಟು ಸಮಯವನ್ನು ಆ್ಯಪ್​​ ನೋಡುವುದರಲ್ಲಿ ಕಳೆಯುತ್ತಿದ್ದ. ಆದರೆ, ಆಗಸ್ಟ್ 7ರ ವೇಳೆಗೆ ಜಾಗತಿಕವಾಗಿ ಇದು ಕೇವಲ 3 ನಿಮಿಷಕ್ಕೆ ಇಳಿದಿದೆ.

ಹೋಲಿಕೆ ಮಾಡಿ ನೋಡುವುದಾದರೆ ಎಕ್ಸ್ (ಹಿಂದೆ ಟ್ವಿಟರ್) ಆಂಡ್ರಾಯ್ಡ್​​ನಲ್ಲಿಯೇ 100 ದಶಲಕ್ಷಕ್ಕೂ ಹೆಚ್ಚು ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಮತ್ತು ಇವರು ನಿರಂತರವಾಗಿ ದಿನಕ್ಕೆ ಸುಮಾರು 25 ನಿಮಿಷಗಳನ್ನು ಆ್ಯಪ್​​ನಲ್ಲಿ ಕಳೆಯುತ್ತಾರೆ ಎಂದು ಡೇಟಾ ತೋರಿಸಿದೆ. ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಈಗಿನ ಎಕ್ಸ್​​ ಅಪ್ಲಿಕೇಶನ್​ಗೆ ಮೆಟಾದ ಥ್ರೆಡ್ಸ್​​ ಪೈಪೋಟಿ ನೀಡಲಿದೆ ಎನ್ನಲಾಗಿತ್ತು. ಆದರೆ, ಥ್ರೆಡ್ಸ್​ ಬಂದಷ್ಟೇ ವೇಗವಾಗಿ ಹೊರ ಹೋಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

ಹೊಸ ಟೆಕ್ಸ್ಟ್​​ ಆಧಾರಿತ ಸೋಷಿಯಲ್ ಮೀಡಿಯಾ ಆ್ಯಪ್​ ಥ್ರೆಡ್ಸ್​ ಜುಲೈನಲ್ಲಿ ಲಾಂಚ್ ಆದಾಗ ದೊಡ್ಡ ಪ್ರಮಾಣದ ಬೆಂಬಲ ಪಡೆದುಕೊಂಡಿತ್ತು. ಆದರೆ, ಥ್ರೆಡ್ಸ್​ನ ಸಕ್ರಿಯ ಬಳಕೆದಾರರಲ್ಲಿನ ಉತ್ಸಾಹ ಹೆಚ್ಚು ಕಾಲ ಉಳಿಯಲಿಲ್ಲ. ಹೊಸ ಬಳಕೆದಾರರು ಅಪ್ಲಿಕೇಶನ್ ಅನ್ನು ಪರಿಶೀಲಿಸುವಾಗ ಮತ್ತು ಅದರಲ್ಲಿ ಇನ್ನೂ ಯಾರಿದ್ದಾರೆ ಎಂಬುದನ್ನು ನೋಡುವಲ್ಲಿ ನಿರತರಾಗಿದ್ದಾಗ ಮೊದಲ ಎರಡು ದಿನಗಳಲ್ಲಿ ಅಪ್ಲಿಕೇಶನ್​​ನ ಸಕ್ರಿಯ ಬಳಕೆದಾರರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಅದು ವೇಗವಾಗಿ ಮಸುಕಾಯಿತು ಎಂದು ಸಿಮಿಲರ್​ ವೆಬ್ ಹೇಳಿದೆ.

ಎಕ್ಸ್ (ಟ್ವಿಟರ್) ಬಳಕೆದಾರರನ್ನು ತನ್ನತ್ತ ಬರುವಂತೆ ಮಾಡುವ ವಿಶಿಷ್ಟ ಕಂಟೆಂಟ್​​ ಯಾವುದೂ ಸದ್ಯ ಥ್ರೆಡ್ಸ್​​ನಲ್ಲಿ ಇಲ್ಲ. ಇದು ಇವಾಗ ಎಕ್ಸ್ ಮಾಲೀಕ ಎಲೋನ್ ಮಸ್ಕ್ ಅವರನ್ನು ಟೀಕಿಸುವ ಪೋಸ್ಟ್​ಗಳನ್ನು ಹಾಕುವ ಮತ್ತು ಕಾಮೆಂಟ್ ಮಾಡುವ ಮಧ್ಯಮವಾಗಿ ಉಳಿದುಕೊಂಡಿದೆ. ಎಕ್ಸ್​​ಗೆ ಪರ್ಯಾಯವಾಗಲು ಥ್ರೆಡ್ಸ್​​ ಈಗಲೂ ಉತ್ತಮ ಅವಕಾಶ ಹೊಂದಿದೆ. ಆದರೆ, ಅದು ಬಳಕೆದಾರರಿಗೆ ಉಪಯುಕ್ತವಾಗುವ ಇನ್ನೂ ಬಹಳಷ್ಟು ವೈಶಿಷ್ಟ್ಯಗಳನ್ನು ಪರಿಚಯಿಸಬೇಕಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ :Luna-25: 47 ವರ್ಷದ ಬಳಿಕ ಚಂದ್ರನಲ್ಲಿಗೆ ಹಾರಿದ ರಷ್ಯಾ ನೌಕೆ; ಚಂದ್ರಯಾನ-3 ಜೊತೆಗೇ ಇಳಿಯಬಹುದು ಲ್ಯಾಂಡರ್!

ABOUT THE AUTHOR

...view details