ನವದೆಹಲಿ : ದೇಶದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (artificial intelligence -AI) ತಂತ್ರಜ್ಞಾನದ ಬೆಳವಣಿಗೆಯನ್ನು ನಿರ್ಬಂಧಿಸುವ ಯಾವುದೇ ಕಾನೂನುಗಳನ್ನು ಜಾರಿಗೊಳಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ಚಾಟ್ಬಾಟ್ಗಳು ದೇಶದಲ್ಲಿ ವ್ಯಾಪಕ ಜನಪ್ರಿಯತೆ ಗಳಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಈ ಹೇಳಿಕೆ ಬಂದಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ತಾನು ದೇಶ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ AI ಯನ್ನು ಮಹತ್ವದ ಮತ್ತು ಕಾರ್ಯತಂತ್ರದ ಕ್ಷೇತ್ರವಾಗಿ ಪರಿಗಣಿಸುತ್ತದೆ ಎಂದು ಹೇಳಿದೆ.
ಎಐ ಉದ್ಯಮಶೀಲತೆ ಮತ್ತು ವ್ಯವಹಾರದ ಬೆಳವಣಿಗೆಗೆ ಅನುಕೂಲವಾದ ಚಲನಶೀಲ ಪರಿಣಾಮ ಬೀರುತ್ತದೆ ಮತ್ತು ದೇಶದಲ್ಲಿ ದೃಢವಾದ AI ವಲಯವನ್ನು ಅಭಿವೃದ್ಧಿಪಡಿಸಲು ಸರ್ಕಾರವು ನೀತಿಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಚಿವಾಲಯ ಹೇಳಿದೆ. ಸರ್ಕಾರವು ಜೂನ್ 2018 ರಲ್ಲಿ ಕೃತಕ ಬುದ್ಧಿಮತ್ತೆಗಾಗಿ ರಾಷ್ಟ್ರೀಯ ನೀತಿಯನ್ನು ಪ್ರಕಟಿಸಿತು ಮತ್ತು AI ಯ ಸಂಶೋಧನೆ ಮತ್ತು ಅಳವಡಿಕೆಗಾಗಿ ಪರಿಸರ ವ್ಯವಸ್ಥೆಯನ್ನು (ecosystem) ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ.
ಈ ವಿಶೇಷ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಅನ್ವೇಷಿಸಲು AI ಸೇರಿದಂತೆ ವಿವಿಧ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಈ ಕೇಂದ್ರಗಳು ಸ್ಟಾರ್ಟ್ ಅಪ್‌ಗಳಿಗೆ ಪ್ರೀಮಿಯಂ ಪ್ಲಗ್-ಅಂಡ್-ಪ್ಲೇ ಸಹ-ಕೆಲಸದ ಸ್ಥಳಗಳನ್ನು ಮತ್ತು ಪರಿಸರ ವ್ಯವಸ್ಥೆಗೆ ಪ್ರವೇಶವನ್ನು ಒದಗಿಸುತ್ತವೆ ಎಂದು ಲೋಕಸಭೆಗೆ ತಿಳಿಸಿದ ತನ್ನ ಉತ್ತರದಲ್ಲಿ ಅದು ಹೇಳಿದೆ. ಭಾರತವು ಗ್ಲೋಬಲ್ ಪಾರ್ಟ್‌ನರ್‌ಶಿಪ್ ಆನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (GPAI) ಸಂಘಟನೆಯ ಸ್ಥಾಪಕ ಸದಸ್ಯ ರಾಷ್ಟ್ರವಾಗಿರುವುದು ಗಮನಾರ್ಹ.