ಬೆಂಗಳೂರು:ಯುಪಿಐ ಪೇಮೆಂಟ್ ಬೆಂಬಲಿಸುವ ನೋಕಿಯಾ 105 ಕ್ಲಾಸಿಕ್ (Nokia 105 Classic) ಫೀಚರ್ ಫೋನ್ ಗುರುವಾರ ಅ.26 ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್ನಲ್ಲಿ ಇನ್ ಬಿಲ್ಟ್ ಯುಪಿಐ ಪೇಮೆಂಟ್ ಆ್ಯಪ್ ಇದ್ದು, ಇದನ್ನು ಬಳಸಿ ಸುಲಭವಾಗಿ ಯುಪಿಐ ಪಾವತಿಗಳನ್ನು ಮಾಡಬಹುದು. ಈ ಹ್ಯಾಂಡ್ಸೆಟ್ ಮೇಲೆ ಕಂಪನಿ ಒಂದು ವರ್ಷದ ರಿಪ್ಲೇಸ್ಮೆಂಟ್ ಗ್ಯಾರಂಟಿ ನೀಡುತ್ತದೆ.
ಈ ಫೋನ್ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಮಾದರಿಗಳಲ್ಲಿ ಲಭ್ಯವಿದ್ದು, ಚಾರ್ಜರ್ ನೊಂದಿಗೆ ಅಥವಾ ಇಲ್ಲದೆ ಖರೀದಿಸಬಹುದು. ಎರಡು ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಈ ವರ್ಷದ ಆರಂಭದಲ್ಲಿ ಇನ್ ಬಿಲ್ಟ್ ಯುಪಿಐ 123 ಪೇ ಬೆಂಬಲದೊಂದಿಗೆ ಬಿಡುಗಡೆಯಾದ ನೋಕಿಯಾ 105 ಶ್ರೇಣಿಗೆ ಈ ಫೋನ್ ಸೇರಿದೆ.
ನೋಕಿಯಾ 105 ಕ್ಲಾಸಿಕ್ ಬೆಲೆ:ನೀಲಿ ಮತ್ತು ಚಾರ್ಕೋಲ್ ಬಣ್ಣಗಳಲ್ಲಿ ಲಭ್ಯವಿರುವ ನೋಕಿಯಾ 105 ಕ್ಲಾಸಿಕ್ ಭಾರತದಲ್ಲಿ 999 ರೂ.ಗೆ ಲಭ್ಯವಿದೆ. ಈ ಫೋನ್ ಅಕ್ಟೋಬರ್ 26 ರಿಂದ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಆಯ್ಕೆಗಳೊಂದಿಗೆ ನಾಲ್ಕು ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ನೋಕಿಯಾ 105 ಕ್ಲಾಸಿಕ್ ವಿಶೇಷತೆಗಳು: ನೋಕಿಯಾ 105 ಕ್ಲಾಸಿಕ್ ಅನ್ನು ಕಠಿಣ ಪರಿಸ್ಥಿತಿಗಳಲ್ಲಿ ದೀರ್ಘಾವಧಿಗೆ ಬಾಳಿಕೆ ಬರುವಂತೆ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಕೀ ಗಳ ನಡುವಿನ ವಿಶಿಷ್ಟ ಅಂತರದ ಕಾರಣದಿಂದ ಇದನ್ನು ಬಳಸುವುದು ಸುಲಭವಾಗಿದೆ. ನೋಕಿಯಾ 105 ಕ್ಲಾಸಿಕ್ ನ ಗುಣ ವಿಶೇಷತೆಗಳ ಸಂಪೂರ್ಣ ಪಟ್ಟಿಯನ್ನು ಎಚ್ಎಂಡಿ ಗ್ಲೋಬಲ್ ಈವರೆಗೂ ಬಿಡುಗಡೆ ಮಾಡಿಲ್ಲವಾದರೂ, ಫೋನ್ ನಲ್ಲಿ 800 ಎಂಎಎಚ್ ಬ್ಯಾಟರಿ ಇದೆ ಎಂದು ಕಂಪನಿ ದೃಢಪಡಿಸಿದೆ.
ನೋಕಿಯಾ 105 ಕ್ಲಾಸಿಕ್ ವೈರ್ ಲೆಸ್ ಎಫ್ ಎಂ ರೇಡಿಯೋ ಕನೆಕ್ಟಿವಿಟಿ ಹೊಂದಿದೆ. ನೋಕಿಯಾ 105 ಕ್ಲಾಸಿಕ್ ಯುಪಿಐ ಪೇಮೆಂಟ್ಗಳನ್ನು ಬೆಂಬಲಿಸುತ್ತದೆ ಎಂದು ಕಂಪನಿಯು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರೂ ನಿರ್ದಿಷ್ಟವಾಗಿ ಯಾವ ಯುಪಿಐ ಆ್ಯಪ್ ಅನ್ನು ಇದು ಬೆಂಬಲಿಸುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಫೀಚರ್ ಫೋನ್ ಎಂಬುದು ಮೂಲಭೂತ ಕಾರ್ಯಗಳನ್ನು ಪೂರ್ಣಗೊಳಿಸಬಲ್ಲ ಮೊಬೈಲ್ ಫೋನ್ ಆಗಿದ್ದರೂ ಇದು ಸ್ಮಾರ್ಟ್ ಫೋನ್ ನ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿರುವುದಿಲ್ಲ. ಸಾಮಾನ್ಯವಾಗಿ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಈ ಫೋನ್ಗಳನ್ನು ತಯಾರಿಸಲಾಗಿರುತ್ತದೆ.
ಇದನ್ನೂ ಓದಿ: ದೇಶದ ಪ್ರಥಮ ಉಪಗ್ರಹ ಆಧಾರಿತ ಬ್ರಾಡ್ಬ್ಯಾಂಡ್ ಸೇವೆ ಜಿಯೋಸ್ಪೇಸ್ ಫೈಬರ್ ಲಾಂಚ್