ಸ್ಟಾಕ್‌ಹೋಮ್ (ಸ್ವೀಡನ್) :ಭೌತಶಾಸ್ತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಈ ವರ್ಷ ಮೂವರಿಗೆ ನೀಡಲಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಭೌತಶಾಸ್ತ್ರದ ಪ್ರಶಸ್ತಿ ಘೋಷಿಸಿದ್ದು, ಅಮೆರಿಕದ ಪೆರ್ರಿ ಅಗೋಸ್ಟಿನಿ, ಜರ್ಮನಿಯ ಫೆರೆಂಕ್ ಕ್ರೌಸ್ ಮತ್ತು ಸ್ವೀಡನ್‌ನ ಅನ್ನೆ ಎಲ್.ಹ್ಯೂಲಿಯರ್ ಅವರನ್ನು 2023ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಹೆಸರಿಸಲಾಗಿದೆ.
ಪೆರ್ರಿ ಅಗೋಸ್ಟಿನಿ ಅಮೆರಿಕದ ಕೊಲಂಬಸ್ನ ದಿ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದರೆ, ಫೆರೆಂಕ್ ಕ್ರೌಸ್ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಆಫ್ ಕ್ವಾಂಟಮ್ ಆಪ್ಟಿಕ್ಸ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇನ್ನೊಬ್ಬ ವಿಜ್ಞಾನಿಯಾದ ಅನ್ನೆ ಹ್ಯೂಲಿಯರ್ ಅವರು ಸ್ವೀಡನ್ ಲುಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದಾರೆ.
ಮಹತ್ವದ ಸಂಶೋಧನೆಗೆ ಗೌರವ: ಅತ್ಯಂತ ಚಿಕ್ಕದಾದ ಪರಮಾಣುವೊಂದು ವಿಭಜನೆಗೊಂಡ ಒಂದು ಸೆಕೆಂಡ್ನಲ್ಲಿ ಎಲೆಕ್ಟ್ರಾನ್ಗಳನ್ನೂ ಕಾಣಬಹುದು ಎಂಬುದನ್ನು ಈ ಮೂವರೂ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಇದು ಪರಮಾಣುಗಳು ಮತ್ತು ಅಣುಗಳೊಳಗಿನ ಎಲೆಕ್ಟ್ರಾನ್‌ಗಳ ಜಗತ್ತನ್ನು ಅನ್ವೇಷಿಸಲು ಮಾನವ ಜಗತ್ತಿಗೆ ಹೊಸ ಸಾಧನ ನೀಡಿದೆ ಎಂದು ನೊಬೆಲ್ ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಅಭಿಪ್ರಾಯಪಟ್ಟಿದೆ.
ಪರಮಾಣುವೊಂದರಲ್ಲಿ ಎಲೆಕ್ಟ್ರಾನ್‌ಗಳು ಚಲಿಸುವ ಅಥವಾ ಶಕ್ತಿಯನ್ನು ಪರಿವರ್ತಿಸಿಕೊಳ್ಳುವ ಕ್ಷಿಪ್ರ ಪ್ರಕ್ರಿಯೆಯನ್ನು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಇದು ಮುಂದಿನ ಅಧ್ಯಯನಗಳಿಗೆ ನೆರವಾಗಲಿದೆ ಎಂದು ಅಕಾಡೆಮಿ ಹೇಳಿದೆ.