ಸ್ಟಾಕ್ಹೋಮ್ (ಸ್ವೀಡನ್):ರಸಾಯನಶಾಸ್ತ್ರ ವಿಭಾಗದ 2023ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ಇಂದು ಘೋಷಿಸಲಾಯಿತು. ಮೌಂಗಿ ಜಿ. ಬವೆಂಡಿ, ಲೂಯಿಸ್ ಇ. ಬ್ರಸ್ ಮತ್ತು ಅಲೆಕ್ಸಿ ಐ. ಎಕಿಮೊವ್ ಅವರಿಗೆ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಪ್ರಶಸ್ತಿ ಪ್ರಕಟಿಸಿತು.
ಸ್ಟಾಕ್‌ಹೋಮ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಘೋಷಿಸಲಾಯಿತು. ಕ್ವಾಂಟಮ್ ಕಣಗಳ ಆವಿಷ್ಕಾರ ಮತ್ತು ಅಭಿವೃದ್ಧಿಗಾಗಿ ಪ್ರಶಸ್ತಿ ನೀಡಲಾಗಿದೆ. ಈ ಕ್ವಾಂಟಮ್ ನ್ಯಾನೊಪರ್ಟಿಕಲ್ಸ್ ಎಷ್ಟು ಚಿಕ್ಕವೆಂದರೆ ಅವುಗಳ ಗಾತ್ರವೇ ಅವುಗಳ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಇಂಥ ಸಂಕೀರ್ಣ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳಿಗೆ ಪ್ರತಿಷ್ಟಿತ ನೊಬೆಲ್ ಬಂದಿದೆ.
ಕ್ವಾಂಟಮ್ ಕಣಗಳ ಬಳಕೆ ಹೇಗೆ?: ಈ ಕಣಗಳು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ದೂರದರ್ಶನ ಪರದೆಗಳು ಮತ್ತು ಎಲ್ಇಡಿ ದೀಪಗಳಲ್ಲೂ ತಮ್ಮ ಬೆಳಕನ್ನು ಹರಿಸುವ ಸಾಮರ್ಥ್ಯ ಹೊಂದಿವೆ. ಕ್ವಾಂಟಮ್ ಡಾಟ್‌ಗಳನ್ನು ಬಣ್ಣದ ಲೈಟ್ಗಳಿಗೆ ಸಂಶೋಧಕರು ಈ ಮೊದಲು ಬಳಸಿದ್ದರು. ಭವಿಷ್ಯದಲ್ಲಿ ಈ ಕಣಗಳು ಎಲೆಕ್ಟ್ರಾನಿಕ್ಸ್, ಸಣ್ಣ ಸಂವೇದಕಗಳು, ಸ್ಲಿಮ್ಮರ್ ಸೌರ ಕೋಶಗಳು ಮತ್ತು ಬಹುಶಃ ಎನ್‌ಕ್ರಿಪ್ಟ್ ಮಾಡಿದ ಕ್ವಾಂಟಮ್ ಸಂವಹನಕ್ಕೂ ಕೊಡುಗೆ ನೀಡಬಹುದು ಎಂದು ನಂಬಲಾಗಿದೆ. ಅಷ್ಟೇ ಅಲ್ಲದೇ, ಗೆಡ್ಡೆಯ ಶಸ್ತ್ರಚಿಕಿತ್ಸೆಯ ವೇಳೆ ಕ್ವಾಂಟಮ್ ಕಣಗಳಿಂದ ಹೊರಹೊಮ್ಮುವ ರಾಸಾಯನಿಕ ಪ್ರತಿಕ್ರಿಯೆ ಮತ್ತು ಬೆಳಕು ಶಸ್ತ್ರಚಿಕಿತ್ಸಕರ ನೆರವಿಗೂ ಬರಲಿದೆ.
2023ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು, ಕ್ವಾಂಟಮ್ ಕಣಗಳನ್ನು ಅತ್ಯಂತ ಚಿಕ್ಕ ಗಾತ್ರದಲ್ಲಿ ಆವಿಷ್ಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವುಗಳ ಗುಣಲಕ್ಷಣಗಳನ್ನು ಕ್ವಾಂಟಮ್ ವಿದ್ಯಮಾನಗಳಿಂದ ನಿರ್ಧರಿಸಲಾಗುತ್ತದೆ. ಕ್ವಾಂಟಮ್ ಕಣಗಳೆಂದು ಕರೆಯಲ್ಪಡುವ ಈ ಕಣಗಳು ಈಗ ನ್ಯಾನೊ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.